ಬಿಸಿಯೂಟಕ್ಕೆ ನೇಮಕವಾದ ದಲಿತ ಮಹಿಳೆಗೆ ಅವಮಾನ: ವೇದಕುಮಾರ್ ಖಂಡನೆ

ಬಿಸಿಯೂಟಕ್ಕೆ ನೇಮಕವಾದ ದಲಿತ ಮಹಿಳೆಗೆ ಅವಮಾನ: ವೇದಕುಮಾರ್ ಖಂಡನೆ

ಕೊಡ್ಲಿಪೇಟೆ: ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹೊಮ್ಮ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟಕ್ಕೆ ದಲಿತ ಮಹಿಳೆಯನ್ನು ನೇಮಿಸಿದ್ದಕ್ಕೆ ಶಾಲೆಯ 21 ಮಕ್ಕಳು ಶಾಲೆಯನ್ನೇ ತೊರೆದು ಬೇರೆ ಶಾಲೆಗೆ ಸೇರ್ಪಡೆಗೊಳ್ಳುತ್ತಿರುವ ವಿಷಯ ನಿಜಕ್ಕೂ ದುರದೃಷ್ಟಕರವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಜಿಲ್ಲಾ ಮಾದ್ಯಮ ವಕ್ತಾರ ಡಿ.ಆರ್.ವೇದಕುಮಾರ್ ಪತ್ರಿಕಾ ಪ್ರಕಟಣೆಯ ಮೂಲಕ ಈ ಘಟನೆಯನ್ನು ಖಂಡಿಸಿದ್ದಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು 78 ವರ್ಷಗಳೇ ಕಳೆದರು ಕೂಡ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದಕ್ಕೆ ಇದೊಂದು ಜೀವಂತ ಉದಾಹರಣೆಯಾಗಿದೆ. ಹಿಂದೂ ನಾವೆಲ್ಲ ಒಂದು ಎನ್ನುವ ಯಾವ ಹಿಂದೂ ಪರ ಸಂಘಟನೆಗಳು ಈ ಬಗ್ಗೆ ತುಟಿ ಬಿಚ್ಚದೇ ಇರುವುದು ವಿಷಾದಕರ ಸಂಗತಿ.ಬಿಸಿಯೂಟಕ್ಕೆ ನೇಮಕವಾಗಿರುವ ದಲಿತ ಮಹಿಳೆ ಹಿಂದೂ ಅಲ್ಲವೇ!ಪೋಷಕರ ಈ ರೀತಿಯ ಹೀನ ಮನಸ್ಥಿತಿಯನ್ನು ನೋಡಿದರೆ ನಿಜಕ್ಕೂ ಅಸಹ್ಯವೆನಿಸುತ್ತಿದೆ.ಜ್ಞಾನ ದೇಗುಲದಲ್ಲಿಯೇ ಪೋಷಕರು ಮಕ್ಕಳ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಿ ಇಂತಹ ಕೀಳು ಮನೋಭಾವನೆ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.ಸರಕಾರ ಇಂತಹ ಅಘಾತಕಾರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ  ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ವೇದಕುಮಾರ್ ಒತ್ತಾಯಿಸಿದ್ದಾರೆ.