ಕುಶಾಲನಗರ: ಜೂನ್ ಎರಡನೇ ವಾರ ನೂತನ ಪುರಸಭೆ ಕಟ್ಟಡ ಉದ್ಘಾಟನೆ

ಕುಶಾಲನಗರ(Coorgdaily): ಪಟ್ಟಣ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ನೂತನ ಪುರಸಭೆ ಹಾಗೂ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭವನ್ನು ಜೂನ್ ಎರಡನೇ ವಾರದಲ್ಲಿ ನಡೆಸಲು ಬುಧವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭಾ ಕಚೇರಿ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು,ಉದ್ಘಾಟನೆ ಮಾಡುವ ಬಗ್ಗೆ ಹಾಗೂ ಹಾಲಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರಸಭೆ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಪುರಸಭೆ ಕಟ್ಟಡ ಎರಡನೇ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದೆ. ಸದಸ್ಯರು ಕಟ್ಟಡ ನಿರ್ಮಾಣದ ಬಗ್ಗೆ ಆರೋಪ ಪ್ರತ್ಯಾರೋಪ ಮಾಡುವ ಬದಲು ಎಲ್ಲರೂ ಒಟ್ಟಾಗಿ ನೂತನ ಕಟ್ಟಡ ಉದ್ಘಾಟನೆಗೆ ಶ್ರಮಿಸೋಣ ಎಂದು ಸಲಹೆ ನೀಡಿದರು.ಎಲ್ಲಾ ಸದಸ್ಯರು ಕಟ್ಟಡ ಉದ್ಘಾಟನೆಗೆ ಸಮ್ಮತಿ ಸೂಚಿಸಿದರು. ನೂತನ ಕಟ್ಟಡಕ್ಕೆ ವಿಶೇಷ ಪೂಜೆಯೊಂದಿಗೆ ಅದ್ಧೂರಿಯಾಗಿ ಸಮಾರಂಭ ನಡೆಸುವಂತೆ ಸದಸ್ಯರು ಅಧ್ಯಕ್ಷರಿಗೆ ಸಲಹೆ ನೀಡಿದರು.
ಸದಸ್ಯ ಡಿ.ಕೆ.ತಿಮ್ಮಪ್ಪ ಹಾಗೂ ಜೈವರ್ಧನ್ ಮಾತನಾಡಿ ನೂತನ ಪುರಸಭೆ ಕಚೇರಿಯ ರಸ್ತೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಸರಿಯಾಗಿ ನಡೆದಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಹಾಯಕ ಎಂಜಿನಿಯರ್ ಅರ್ಬಜ್ ಅಹಮದ್ ಮಾತನಾಡಿ, ಇದೀಗ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ.ಮಳೆ ಕಡಿಮೆಯಾದ ನಂತರ ಉತ್ತಮ ರಸ್ತೆ ನಿರ್ಮಿಸಲಾಗುತ್ತದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಚೇರಿ ಒಳಭಾಗದ ಕೆಲಸ ಕೂಡ ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಮುಖ್ಯಾಧಿಕಾರಿ ಗಿರೀಶ್ ಮಾತನಾಡಿ, ಕೊಪ್ಪ ಗೇಟ್ ನಿಂದ ತಾವರೆಕೆರೆ ವರೆಗೆ ಪಾದಚಾರಿ ಮಾರ್ಗ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಲು ರೂ.5.37 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಸದಸ್ಯ ನವೀನ್‌ಕುಮಾರ್ ಮಾತನಾಡಿ ಶಿವರಾಮ್ ಕಾರಂತರ ಉದ್ಯಾನವನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಲಾಗಿದ್ದು,ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು
ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ್,ಜಗದೀಶ್,ಹರೀಶ್ ಮಾತನಾಡಿ, ಮುಳ್ಳುಸೋಗೆ, ಗೊಂದಿಬಸವನಹಳ್ಳಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲು ಮನವಿ ಮಾಡಿದರು.
ಸಾರ್ವಜನಿಕರು ತಮ್ಮ ಜಾಗದ ಈ ಸ್ವತ್ತಿಗಾಗಿ ವಾರ,ತಿಂಗಳು ಗಟ್ಟಲೆ ಅಲೆಸುವ ಬದಲು ಒಂದೇ ದಿನದಲ್ಲಿ ಈ ಸ್ವತ್ತು ವಿತರಿಸಲು ಕ್ರಮ ಕೈಗೊಳ್ಳಬೇಕು.ಹಾಗೂ ತೆರಿಗೆಯನ್ನು ಅಪ್ಡೇಟ್ ಮಾಡಲು ಮುಖ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಆನಂದ್ ಕುಮಾರ್ ಹಾಗೂ ಅಮೃತ್ ರಾಜ್ ಒತ್ತಾಯಿಸಿದರು.
ಸದಸ್ಯ ಶೇಖ ಖಲೀಮುಲ್ಲಾ ಮಾತನಾಡಿ, ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ನದಿ ಅಂಚಿನಲ್ಲಿರುವ ಸಾಯಿ ಬಡಾವಣೆ,ಕುವೆಂಪು ಬಡಾವಣೆ, ರಸಲ್,ಶೈಲಜಾ, ವಿವೇಕಾನಂದ, ದಂಡಿನಪೇಟೆ,ಇಂದಿರಾ,ಯೋಗಾನಂದ ಬಡಾವಣೆಗಳು ಪ್ರವಾಹ ಪರಿಸ್ಥಿತಿ ಎದುರಿಸುವ ಬಡಾವಣೆ ಗಳಾಗಿದ್ದು, ಏನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ಗಿರೀಶ್ ಮಾತನಾಡಿ,ಈಗಾಗಲೇ ನದಿ ಅಂಚಿನಲ್ಲಿರುವ 293 ಮನೆಗಳನ್ನು ಗುರುತು ಮಾಡಿ ಅವರಿಗೆ ನೋಟಿಸ್ ಕೂಡ ನೀಡಲಾಗಿದೆ.ಜೊತೆಗೆ ಮನೆಯಲ್ಲಿ ವಯೋವೃದ್ಧರು,ಗರ್ಭಿಣಿಯರು, ಮಕ್ಕಳ ಸಂಖ್ಯೆ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮುನ್ನವೇ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷೆ ಪುಟ್ಟಲಕ್ಷಮ್ಮ,ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಮತ್ತು ಸದಸ್ಯರು,ಆರೋಗ್ಯ ನಿರೀಕ್ಷಕ ಉದಯಕುಮಾರ್, ಕಂದಾಯ ಅಧಿಕಾರಿ ಧನಂಜಯ, ನಂಜುಂಡ,ರಾಮು,ಸಿಬ್ಬಂದಿಗಳು ಹಾಜರಿದ್ದರು.