ಕೊಡಗು: ಮೇ 25 ರವರೆಗೆ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ವಿಸ್ತರಣೆ

ಮಡಿಕೇರಿ:ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಸಂಬಂಧ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಕೈಗೊಳ್ಳಲು ಮೇ, 25 ರವರೆಗೆ ವಿಸ್ತರಿಸಲಾಗಿದ್ದು, ಮೇ, 20 ರೊಳಗೆ ಶೇ.100 ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ಮೇ, 25 ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ಅವಕಾಶ ಮಾಡಿದೆ. ಆದರೂ ಸಹ ಮೇ, 20 ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದ್ದಾರೆ. ಸಮೀಕ್ಷೆ ಬ್ಲಾಕ್ ವ್ಯಾಪ್ತಿಯಲ್ಲಿ ಮೇ, 26 ರಿಂದ 28 ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ನಿಗದಿಪಡಿಸಲಾಗಿದೆ. ಹಾಗೆಯೇ ಮೇ, 19 ರಿಂದ 28 ರವರೆಗೆ ಆನ್‍ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೇ, 26 ರಿಂದ 28 ರವರೆಗೆ ನಡೆಯುವ ವಿಶೇಷ ಶಿಬಿರದಲ್ಲಿ ಸಮೀಕ್ಷೆಯಲ್ಲಿ ಗಣತಿದಾರರು ಘೋಷಿತ ಮತಗಟ್ಟೆಗಳಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಮನೆ ಮನೆ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದಂತಹ ಪರಿಶಿಷ್ಟ ಜಾತಿಯ ಕುಟುಂಬದವರು ಶಿಬಿರಕ್ಕೆ ಆಗಮಿಸಿದಾಗ ಸುಸೂತ್ರವಾಗಿ ಸಮೀಕ್ಷೆ ಕೈಗೊಳ್ಳಲು ಆಯೋಗ ತಿಳಿಸಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಯಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಸೇರಿದವರ ಪ್ರಾಧಾನ್ಯತೆ ಕುರಿತು ‘ಎಂಪರಿಕಲ್ ಡಾಟಾ’ ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (ಉಪ ವರ್ಗೀಕರಣ) ಬಗ್ಗೆ ವರದಿ ಸಲ್ಲಿಸಲು ಮಾನ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಿರುವುದು ವಿಶೇಷವಾಗಿದೆ.
ಮೇ, 05 ರಿಂದ ನಡೆಯುತ್ತಿರುವ ಸಮೀಕ್ಷೆಯು ಕೊಡಗು ಜಿಲ್ಲೆಯಲ್ಲಿ ಶೇ.78.56 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ 8 ನೇ ಸ್ಥಾನದಲ್ಲಿದ್ದು, ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಮಾಹಿತಿ ನೀಡಿದ್ದಾರೆ.