ಮುಂಗಾರು; ಸೆಸ್ಕ್ ವಿಭಾಗದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ರಮೇಶ್ ಬಂಡಿಸಿದ್ದೇಗೌಡ :ಕಳೆದ ಬಾರಿ ಮುಂಗಾರು ಅವಧಿಯಲ್ಲಿ 4 ಸಾವಿರಕ್ಕೂ ಹೆಚ್ಚು ಕಂಬಗಳು ಹಾನಿ

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಅವರು ತಿಳಿಸಿದ್ದಾರೆ. ನಗರದ ಸೆಸ್ಕ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷರು ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಹೆಚ್ಚಿನ ಮಳೆಯಾಗುವ ಹಿನ್ನೆಲೆ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಕ್ಕೆ ಹಾನಿಯಾಗುವುದು ಕಂಡು ಬರುತ್ತದೆ. ಆದ್ದರಿಂದ ಆಯಾಯ ಸಂದರ್ಭದಲ್ಲಿಯೇ ವಿದ್ಯುತ್ ಕಂಬ ಹಾಗೂ ಪರಿವರ್ತಕರಗಳ ಬದಲಾವಣೆಗೆ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಕಳೆದ ಬಾರಿ ಮುಂಗಾರು ಅವಧಿಯಲ್ಲಿ 4 ಸಾವಿರಕ್ಕೂ ಹೆಚ್ಚು ಕಂಬಗಳು ಹಾನಿಯಾಗಿತ್ತು, ಹಾಗೆಯೇ ಹಲವು ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದವು, ಆ ಸಂದರ್ಭದಲ್ಲಿ 24 ಗಂಟೆಯೊಳಗೆ ಸರಿಪಡಿಸುವ ಕಾರ್ಯ ನಡೆದಿತ್ತು ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು. ಮುಂಗಾರು ಸಂದರ್ಭದಲ್ಲಿ ವಿದ್ಯುತ್ ಅವಘಡಗಳನ್ನು ತಪ್ಪಿಸಿ, ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೆಚ್ಚಿನ ಲೈನ್‍ಮೆನ್ ಹಾಗೂ ಗ್ಯಾಂಗ್‍ಮೆನ್‍ಗಳನ್ನು ನಿಯೋಜಿಸಲಾಗಿದೆ ಎಂದರು.
ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮುನ್ನೆಚ್ಚರ ವಹಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಲೈನ್‍ಮೆನ್‍ಗಳಿಗೆ ಸ್ಮಾರ್ಟ್ ಪೋನ್‍ಗಳನ್ನು ಸಹ ವಿತರಿಸಲಾಗಿದೆ. ಟೋಲ್ ಫ್ರೀ ಸಂಖ್ಯೆಯನ್ನು ಸಹ ನೀಡಲಾಗುತ್ತಿದ್ದು, ಸಾರ್ವಜನಿಕರು ವಿದ್ಯುತ್ ಅಡಚಣೆ ಸಂಬಂಧಿಸಿದಂತೆ ಮಾಹಿತಿ ನೀಡಬಹುದಾಗಿದೆ ಎಂದು ರಮೇಶ್ ಬಂಡಿಸಿದ್ದೇಗೌಡ ಅವರು ವಿವರಿಸಿದರು.
ಪೂರ್ವ ಮುಂಗಾರು ಸಂದರ್ಭದಲ್ಲಿ 650 ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಬದಲಿಸಲಾಗಿದೆ. ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಸಮಸ್ಯೆಗಳು ಬರದಂತೆ ಎಲ್ಲಾ ರೀತಿಯ ಮುನ್ನೆಚ್ಚರ ವಹಿಸಲಾಗಿದೆ ಎಂದರು. ಸೆಸ್ಕ್ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು ಸಮನ್ವಯತೆಯಿಂದ ಎಲ್ಲರ ವಿಶ್ವಾಸ ಪಡೆದು ಕೆಲಸ ನಿರ್ವಹಿಸಲಿದ್ದಾರೆ ಎಂದರು.
ಮಾದಾಪುರದಲ್ಲಿ ಉಪ ವಿದ್ಯುತ್ ಘಟಕ ನಿರ್ಮಾಣಕ್ಕೆ ಒಂದು ವಾರದಲ್ಲಿ ಚಾಲನೆ ನೀಡಲಾಗುವುದು. ಹಾಗೆಯೇ ಮೂರ್ನಾಡು ಮತ್ತು ಹುದಿಕೇರಿಯಲ್ಲಿ ವಿದ್ಯುತ್ ಉಪ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ರಮೇಶ್ ಬಂಡಿಸಿದ್ದೇಗೌಡ ಅವರು ತಿಳಿಸಿದರು. ವಿದ್ಯುತ್ ಅವಘಡಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಲ್ಲಿ ತಕ್ಷಣವೇ ಸ್ಪಂದಿಸಲಾಗುವುದು. ಆ ನಿಟ್ಟಿನಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕೃಷಿಕರಿಗೆ 10 ಹೆಚ್‍ಪಿ ಉಚಿತ ವಿದ್ಯುತ್ ಪೂರೈಕೆ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಬಗ್ಗೆ ಸಚಿವರು ಹಾಗೂ ಶಾಸಕರೊಂದಿಗೆ ಚರ್ಚೆ ನಡೆದಿದ್ದು, ಆದಷ್ಟು ಶೀಘ್ರ ಪರಿಹಾರ ದೊರೆಯಲಿದೆ. ಕೊಡಗು ಜಿಲ್ಲೆಯ ಜನರಿಗೆ ಉತ್ತಮ ಸ್ಪಂದನೆ ದೊರೆಯಲಿದೆ ಎಂದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಡಿಯಲ್ಲಿ ಲೈನ್‍ಮೆನ್‍ಗಳನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ಹಾಗೆಯೇ ಗ್ಯಾಂಗ್‍ಮೆನ್‍ಗಳನ್ನುಸಹ ನಿಯೋಜಿಸಲಾಗುತ್ತದೆ. ಜೂನ್, 01 ರಿಂದ ಟೋಲ್ ಫ್ರೀ ಸಂಖ್ಯೆ ದೊರೆಯಲಿದೆ ಎಂದು ತಿಳಿಸಿದರು.
ಲೈನ್‍ಮೆನ್‍ಗಳಿಗೆ ಇದೇ ಸಂದರ್ಭದಲ್ಲಿ ಕಿಟ್‍ಗಳನ್ನು ವಿತರಿಸಲಾಯಿತು. ಅಧೀಕ್ಷಕರ ಎಂಜಿನಿಯರ್ ಸೋಮಶೇಖರ್ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಂ.ರಾಮಚಂದ್ರ, ಬೃಹತ್ ಕಾಮಗಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಾದೇಶ್ ಇತರರು ಇದ್ದರು.