ಮೈಸೂರಿನ ಸಂಚಾರ ವ್ಯವಸ್ಥೆಗೆ ಮತ್ತಷ್ಟು ಕಾಯಕಲ್ಪ ಸಂಸದ ಯದುವೀರ್‌: ರೈಲ್ವೆ ಪ್ರಧಾನ ವ್ಯವಸ್ಥಾಪಕರ ಜೊತೆ ಸಮಾಲೋಚನೆ, ಫ್ಲೈಓವರ್‌, ಅಂಡರ್‌ ಪಾಸ್‌ ನಿರ್ಮಾಣಕ್ಕೆ ಅನುಮೋದನೆ

Jun 9, 2025 - 20:36
Jun 9, 2025 - 20:54
 0  18
ಮೈಸೂರಿನ ಸಂಚಾರ ವ್ಯವಸ್ಥೆಗೆ ಮತ್ತಷ್ಟು ಕಾಯಕಲ್ಪ ಸಂಸದ ಯದುವೀರ್‌:   ರೈಲ್ವೆ ಪ್ರಧಾನ ವ್ಯವಸ್ಥಾಪಕರ ಜೊತೆ ಸಮಾಲೋಚನೆ, ಫ್ಲೈಓವರ್‌, ಅಂಡರ್‌ ಪಾಸ್‌ ನಿರ್ಮಾಣಕ್ಕೆ ಅನುಮೋದನೆ

ಮೈಸೂರು:ನಮ್ಮ ಮೈಸೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೂ ಚಾಲನೆ ನೀಡಲಾಗುತ್ತದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕರೊಂದಿಗೆ ಸಮಗ್ರ ಸಮಾಲೋಚನೆ ನಡೆಸಿದ ಸಂಸದರು, ಹಲವಾರು ಅನುಮೋದನೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಧಾನ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಂಸದ ಯದುವೀರ್‌, ರೈಲ್ವೆ ಇಲಾಖೆಯ ಕಡೆಯಿಂದ ಅನುಮೋದನೆಗಳನ್ನು ಪಡೆಯಲಾಗಿದೆ ಎಂದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರು, ಬನ್ನಿಮಂಟಪ ಕಡೆಗೆ ಬರುವಾಗ ಫ್ಲೈ ಓವರ್‌ ನಿರ್ಮಿಸಲಾಗುತ್ತದೆ. ಬನ್ನಿಮಂಟಪ, ಇದಲ್ಲದೇ ಸರ್ವೀಸ್‌ ರಸ್ತೆ (ಸ್ಲಿಪ್‌ ರೋಡ್‌)ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.

ಮೈಸೂರು ಹೊರ ವರ್ತುಲ ರಸ್ತೆಯ ಮಣಿಪಾಲ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಂಡರ್‌ ಪಾಸ್‌ ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಯದುವೀರ್‌ ತಿಳಿಸಿದ್ದಾರೆ.ಈಗಾಗಲೇ ಯೋಜನೆ ಅರಂಭಕ್ಕೆ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಮುಂದಿನ ಮೂರು ತಿಂಗಳಿನಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಿ, ಅತಿ ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಒದಗಿಸುವುದೇ ನಮ್ಮ ಮುಖ್ಯ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಉತ್ತಮ ಸೇವಾ ಸೌಲಭ್ಯಗಳನ್ನು ಕಲ್ಪಿಸಲು, ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಎಲ್ಲ ನೆರವು ಒದಗಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ನಮ್ಮ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದರ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಸಂಸದ ಯದುವೀರ್‌ ಒಡೆಯರ್‌ ವಿವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0