ಮೈಸೂರು: ನಾಳೆ ತಿರಂಗಾ ಯಾತ್ರೆ ಸರ್ವ ಧರ್ಮದ ನಾಯಕರನ್ನು ಭೇಟಿ ಮಾಡಿ ಭಾಗಿಯಾಗುವಂತೆ ಮನವಿ
ಮೈಸೂರು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರನ್ನು ಹತ್ಯೆ ಮಾಡಿದ ಭಯೋತ್ಪಾದಕರನ್ನು ಮಟ್ಟ ಹಾಕಲು ಭಾರತೀಯ ಯೋಧರು ನಡೆಸಿದ "ಆಪರೇಷನ್ ಸಿಂಧೂರ" ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿ ಮೈಸೂರಿನಲ್ಲಿ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.ಮೈಸೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸದ ಯದುವೀರ್, ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು, ಅವರಿಗೆ ಬೆಂಬಲ ಸೂಚಿಸಲು, ಅವರ ಕುಟುಂಬ ಸದಸ್ಯರ ಜೊತೆಗೆ ನಾವೆಲ್ಲರೂ ಇದ್ದೇವೆ ಎಂಬುದನ್ನು ಈ ತಿರಂಗಾ ಯಾತ್ರೆಯ ಮೂಲಕ ಸೂಚಿಸಲಿದ್ದೇವೆ ಎಂದು ತಿಳಿಸಿದರು.ಈ ಯಾತ್ರೆಯಲ್ಲಿ ಭಾಗಿಯಾಗುವಂತೆ ಸರ್ವಧರ್ಮದ ಮುಖ್ಯಸ್ಥರನ್ನು, ಮುಖಂಡರನ್ನು ಆಹ್ವಾನಿಸಿದ್ದೇವೆ ಎಂದು ಯದುವೀರ್ ತಿಳಿಸಿದ್ದಾರೆ.
ಎಲ್ಲರೂ ಬನ್ನಿ ಭಾಗವಹಿಸಿ:
ಮೈಸೂರು ಜಿಲ್ಲೆಯ ಎಲ್ಲ ಪ್ರಮುಖರು, ಉದ್ಯಮಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ನಿವೃತ್ತ ಯೋಧರ ಸಂಘದ ಸದಸ್ಯರು, ಯೋಧರ ಕುಟುಂಬ ಸದಸ್ಯರು, ನಾಗರಿಕರು ಎಲ್ಲರೂ ಈ ಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.ಮೈಸೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ (ಮೆಟ್ರೋ ಪೋಲ್ ಸರ್ಕಲ್) ನಾಳೆ ಬೆಳಗ್ಗೆ ಹತ್ತು ಗಂಟೆಗೆ ಈ ತಿರಂಗಾ ಯಾತ್ರೆ ಆರಂಭವಾಗಲಿದೆ ಎಂದು ಸಂಸದರು ಮಾಹಿತಿ ನೀಡಿದರು.ನಮ್ಮ ಭಾರತೀಯ ಯೋಧರು, ದೇಶದ ರಕ್ಷಣೆ ಹಾಗೂ ನಾಗರಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವ ಹಿಸಿದ್ದಾರೆ. ಜೊತೆಗೆ ಪಾಕಿಸ್ತಾನಕ್ಕೆ ನುಗ್ಗಿ, ಉಗ್ರರನ್ನು ಸದೆಬಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಯದುವೀರ್ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ನಮ್ಮ ಭಾರತೀಯ ಯೋಧರನ್ನು ಕೆಲವರನ್ನು ಕಳೆದುಕೊಂಡಿದ್ದೇವೆ. ಇದು ನಿಜಕ್ಕೂ ದುಃಖದ ಸಂಗತಿ. ಅವರ ಕುಟುಂಬ ಸದಸ್ಯರ ಜೊತೆ ನಾವಿರುತ್ತೇವೆ. ಒಟ್ಟಾರೆಯಾಗಿ ಇಡೀ ದೇಶದ ಯೋಧರ ಬೆಂಬಲಕ್ಕೆ ನಾವು ಇದ್ದೇವೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ ಎಂದರು.ಈ ನಿಟ್ಟಿನಲ್ಲಿ ಎಲ್ಲರೂ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಸರ್ವ ಧರ್ಮದ ನಾಯಕರು ಭಾಗಿ:
ತಿರಂಗಾ ಯಾತ್ರೆಯಲ್ಲಿ ಮೈಸೂರಿನ ಬಹುತೇಕ ಪ್ರಮುಖ ಧಾರ್ಮಿಕ ನಾಯಕರು ಭಾಗಿಯಾಗಲಿದ್ದಾರೆ.ಸಂಸದ ಯದುವೀರ್, ಶಾಸಕ ಶ್ರೀವತ್ಸ, ಹಿರಿಯ ನಾಯಕರು ಈಗಾಗಲೇ ಸರ್ವಧರ್ಮದ ನಾಯಕರನ್ನು ಭೇಟಿ ಮಾಡಿ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಮೈಸೂರಿನ ಸುತ್ತೂರು ಮಠದ ಶ್ರೀ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತ ಪೀಠಾಧಿಪತಿ ಜಗದ್ಗುರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರುˌ ಬಿಷಪ್ ಬರ್ನಾರ್ಡ್ ಮೋರಾಸ್ ಅವರು, ಸರ್ ಖಾಜಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಶರೀಫ್ ಅವರನ್ನು ಭೇಟಿ ಮಾಡಿ ಈ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಆಮಂತ್ರಿಸಿ, ಅವರ ಬೆಂಬಲವನ್ನು ಸಂಸದರು ಕೋರಿದ್ದಾರೆ.
ಎಲ್ಲರೂ ಈ ಬೃಹತ್ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
