ಭಿಕ್ಷುಕನ ಸಾವಿನ ಬಳಿಕ ಬ್ಯಾಗ್‌ ತೆರೆದಾಗ ₹4.5 ಲಕ್ಷ ನಗದು, ವಿದೇಶಿ ಕರೆನ್ಸಿ ಪತ್ತೆ 

ಭಿಕ್ಷುಕನ ಸಾವಿನ ಬಳಿಕ ಬ್ಯಾಗ್‌ ತೆರೆದಾಗ ₹4.5 ಲಕ್ಷ ನಗದು, ವಿದೇಶಿ ಕರೆನ್ಸಿ ಪತ್ತೆ 
Photo credit: TV09

ಆಲಪ್ಪುಳ: ರಸ್ತೆ ಅಪಘಾತದ ನಂತರ ಸಾವನ್ನಪ್ಪಿದ ಭಿಕ್ಷುಕನೊಬ್ಬನ ಬ್ಯಾಗ್‌ನಲ್ಲಿ ₹4.5 ಲಕ್ಷಕ್ಕೂ ಅಧಿಕ ನಗದು ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸೋಮವಾರ ರಾತ್ರಿ ಅಪಘಾತಕ್ಕೀಡಾದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆತ ತನ್ನ ಬಗ್ಗೆ ಹೆಚ್ಚಿನ ವಿವರ ನೀಡದೆ ಆಸ್ಪತ್ರೆಯಿಂದ ಹೊರಟುಹೋಗಿದ್ದಾನೆ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆತ ತನ್ನ ಹೆಸರು ಅನಿಲ್ ಕಿಶೋರ್ ಎಂದು ಹೇಳಿಕೊಂಡಿದ್ದ.

ಮಂಗಳವಾರ ಬೆಳಿಗ್ಗೆ ಅಂಗಡಿಯೊಂದರ ಹೊರಭಾಗದಲ್ಲಿ ಅನಿಲ್ ಕಿಶೋರ್ ಮೃತನಾಗಿ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತದೇಹದ ಬಳಿ ಇದ್ದ ಬ್ಯಾಗ್‌ನ್ನು ಗುರುತು ಪತ್ತೆಗಾಗಿ ಪೊಲೀಸರು ಪರಿಶೀಲಿಸಿದಾಗ, ಅದರೊಳಗೆ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ.

ಸ್ಥಳೀಯ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಬ್ಯಾಗ್ ತೆರೆಯಲಾಗಿದ್ದು, ಹಳೆಯ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಇಡಲಾಗಿದ್ದ ನಗದು ಹಣದಲ್ಲಿ ಈಗಾಗಲೇ ನಿಷೇಧಿತ ₹2,000 ಮುಖಬೆಲೆಯ ನೋಟುಗಳು ಹಾಗೂ ವಿದೇಶಿ ಕರೆನ್ಸಿಯೂ ಸೇರಿದ್ದವು. ಒಟ್ಟು ಹಣದ ಮೊತ್ತ ₹4.5 ಲಕ್ಷಕ್ಕಿಂತ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ.

ಚಾರುಮ್ಮೂಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಿಕ್ಷೆ ಬೇಡುತ್ತಾ ಸಂಚರಿಸುತ್ತಿದ್ದ ಅನಿಲ್ ಕಿಶೋರ್, ಊಟಕ್ಕಾಗಿ ಪ್ರತಿದಿನ ಹಣ ಕೇಳುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಇಂತಹ ವ್ಯಕ್ತಿಯ ಬಳಿ ಇಷ್ಟೊಂದು ಹಣ ಇದ್ದದ್ದು ಬಹಿರಂಗವಾಗುತ್ತಿದ್ದಂತೆ ಸುತ್ತಮುತ್ತಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹಣದ ಮೂಲ ಏನು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಮೃತನ ಕುಟುಂಬದವರು ಹಣದ ಹಕ್ಕು ಮಂಡಿಸಲು ಮುಂದೆ ಬರುತ್ತಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮುಂದಿನ ಕಾನೂನು ಪ್ರಕ್ರಿಯೆಯಂತೆ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.