ಕುಶಾಲನಗರ: ತಾವರೆ ಕೆರೆ ಯಲ್ಲಿ ಮನಸೂರೆಗೊಳ್ಳುವ ಪುಷ್ಪರಾಶಿಯ ಪರಿಮಳ

ಕುಶಾಲನಗರ: ತಾವರೆ ಕೆರೆ ಯಲ್ಲಿ ಮನಸೂರೆಗೊಳ್ಳುವ ಪುಷ್ಪರಾಶಿಯ ಪರಿಮಳ

ಕುಶಾಲನಗರ:ಹೇಳಿ ಕೇಳಿ ಇದು ಹೆಸರೇ ಹೇಳುವಂತೆ ಯಾವಾಗಲೂ ತಾವರೆ ಹೂವುಗಳು ಅರಳಿ ನಿಂತು ಘಮ ಘಮಿಸುವ ತಾವರೆಕೆರೆ.ಈಗ ಈ ಕೆರೆಯ ಸ್ವರೂಪ ಸ್ವಾಭಾವಿಕವಾಗಿ ಬದಲಾದಂತಿದೆ.ಅಂದರೆ, ತಾವರೆ ಹೂವುಗಳ ಬದಲಾಗಿ ಬೇರೆಯದೇ ಕಲಾಕೃತಿಯ ಪುಷ್ಪಗಳು ಅರಳಿ ನಿಂತಿವೆ.ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕುಶಾಲನಗರದ ತಾವರೆಕೆರೆ ಇದೀಗ ರೋಹಿಣಿ ಮಳೆಗೆ ಮೈದುಂಬಿದ್ದು ಕೆರೆಯ ತುಂಬೆಲ್ಲಾ ಕೆಂಪು ಕಂದು ಮಿಶ್ರಿತ ನಕ್ಷತ್ರ ಆಕಾರದ ಕಮಲಗಳು ಅರಳಿ ಪರಿಮಳವನ್ನು ಸೂಸುವ ಮೂಲಕ ಹೆದ್ದಾರಿ ಹೋಕರನ್ನು ತನ್ನತ್ತ ಆಕರ್ಷಿಸುತ್ತಿವೆ.

ಕೆರೆಯ ತುಂಬೆಲ್ಲಾ ಮಳೆಯ ನೀರು ತುಂಬಿದೆ. ಆದರೆ ನೋಡುಗರಿಗೆ ಪ್ರಥಮ ನೋಟದಲ್ಲಿ ಇದು ಕೆರೆಯಂತೆ ಭಾಸವಾಗುವುದೇ ಇಲ್ಲ.ಏಕೆಂದರೆ ಕರೆಯ ಮೂಲ ಸ್ವರೂಪವನ್ನು ಪ್ರಕೃತಿ ಮಾತೆ ಬದಲಾಯಿಸಿದಂತೆ ಭಾಸವಾಗುತ್ತಿದೆ.ಅಂದರೆ, ನೀರೇ ಕಾಣದಂತೆ ಜಲರಾಶಿಯ ಮೇಲೆ ಹಾಸಿಕೊಂಡಿರುವ ಹಸಿರೆಲೆ ಬಳ್ಳಿಗಳು, ಆ ಬಳ್ಳಿಗಳ ಅಲ್ಲಲ್ಲಿ ಆಗಸದಲ್ಲಿ ಚುಕ್ಕೆಗಳು ಇರುವಂತೆ ನಕ್ಷತ್ರಾಕೃತಿಯ ಪಿಂಕ್ ಬಣ್ಣದ ಕಮಲಗಳು, ಆ ಕಮಲಗಳ ಮೇಲೆ ಝೇಂಕಾರ ಗೈಯುತ್ತಾ ಮಧುವನ್ನು ಹೀರಿ ಸಂಭ್ರಮಿಸಿ ಮುತ್ತಿಡುವ ದುಂಬಿಗಳನ್ನು ನೋಡುವುದೇ ಒಂದು ಪರಮಾನಂದ.ಅಷ್ಟೇ ಅಲ್ಲ, ಪುಷ್ಪರಾಶಿ ಹರಡಿರುವ ಈ ಕೆರೆಯೊಳಗೆ ಅಲ್ಲಲ್ಲಿ ಹುಳುಗಳನ್ನು ಹೆಕ್ಕಿ ತಿನ್ನಲು ಮೆಲ್ಲ ಮೆಲ್ಲನೇ ಹಸಿರೆಲೆಗಳ ಮೇಲೆ ಹೆಜ್ಜೆಯಿಟ್ಟು ಸಾಗುವ ಪಕ್ಷಿಗಳು ನಿಜಕ್ಕೂ ನೋಡುಗರಿಗೆ ರೋಮಾಂಚನ ಉಂಟುಮಾಡುತ್ತಿವೆ.

 ಮೂರು ಕೋಟಿ ರೂಗಳಲ್ಲಿ ಅಭಿವೃದ್ದಿ :

ಋತುವಿನಿಂದ ಋತುವಿಗೆ ಆಗಾಗ್ಗೆ ಸ್ವರೂಪ ಬದಲಿಸುತ್ತುರುವ ಈ ತಾವರೆಕೆರೆಯ ಸಮಗ್ರ ಅಭಿವೃದ್ದಿಗೆ ಕುಶಾಲನಗರ ನಗರಾಭಿವೃದ್ದಿ ಪ್ರಾಧಿಕಾರ ಬರೋಬ್ಬರಿ 3 ಕೋಟಿಗಳಲ್ಲಿ ಯೋಜನೆ ರೂಪಿಸಿದೆ.ಕೆರೆಯ ಹೂಳು ತೆಗೆದು ಸುಂದರ ಕೆರೆಯಾಗಿಸುವ ಉದ್ದೇಶ ಹೊಂದಲಾಗಿದ್ದು ಸಣ್ಣ ನೀರಾವರಿ ಇಲಾಖೆ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.

 ಪುರಸಭೆಯ ಏಕೈಕ ಕೆರೆ :

ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಇರುವ ಏಕೈಕ ಕೆರೆಯಾಗಿರುವ ಈ ಕೆರೆಯನ್ನು ಪುರಸಭೆ ಆಡಳಿತ ಮಂಡಳಿ ಅಭಿವೃದ್ದಿ ಪಡಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂಬುದು ಪ್ರಕೃತಿ ಪ್ರಿಯರ ಒತ್ತಾಯವೂ ಆಗಿತ್ತು.ಏಕೆಂದರೆ ಕೆರೆಯನ್ನು ಅಭಿವೃದ್ದಿ ಪಡಿಸಿ ಬೋಟಿಂಗ್ ಅಳವಡಿಸುವುದು, ಕೆರೆಯ ಸುತ್ತಲೂ ವಾಕಿಂಗ್ ಪಾಥ್ ನಿರ್ಮಿಸಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ವಾಯು ವಿಹಾರಕ್ಕೆ ಅನುವು ಮಾಡಿಕೊಡಬೇಕೆಂಬ ಬೇಡಿಕೆಯೂ ಪುರಸಭೆಗೆ ಮೊಳಗಿತ್ತು. ಆದ್ದರಿಂದ ಸುಂದರ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆ ತರದಂತೆ ಕೆರೆಯನ್ನು ಸಮಗ್ರವಾಗಿ ಅಭಿವೃದ್ದಿಯಾದರೆ ಇಂತಹ ಸ್ವಾಭಾವಿಕ ಕ್ರಿಯೆಗಳು ಇನ್ಮುಂದೆ ನಡೆಯಲಾರವು ಅಷ್ಟೆ.

ವಿಶೇಷ ವರದಿ:ಕೆ.ಎಸ್ ಮೂರ್ತಿ ಕಣಿವೆ