ಕೊಡಗು: ಕಳೆದ ಎಂಟು ವರ್ಷಗಳಲ್ಲಿ 22 ಬಾಲ ಕಾರ್ಮಿಕರು ಹಾಗೂ 50 ಕಿಶೋರ ಕಾರ್ಮಿಕರು ಪತ್ತೆ!

ಕೊಡಗು: ಕಳೆದ ಎಂಟು ವರ್ಷಗಳಲ್ಲಿ 22 ಬಾಲ ಕಾರ್ಮಿಕರು ಹಾಗೂ 50 ಕಿಶೋರ ಕಾರ್ಮಿಕರು ಪತ್ತೆ!

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ 2017ರಿಂದ 2025ರ‌ ಮೇ ತಿಂಗಳವರೆಗೆ 22 ಬಾಲ ಕಾರ್ಮಿಕರು ಹಾಗೂ 50 ಕಿಶೋರ ಕಾರ್ಮಿಕರು ಪತ್ತೆಯಾಗಿದೆ.ಇದರಲ್ಲಿ 61 ಗಂಡು ಹಾಗೂ 11 ಹೆಣ್ಣು ಮಕ್ಕಳು ಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.ಕೊಡಗು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿಯ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ.ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಬಾಲ ಕಾರ್ಮಿಕರು ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.2017ರಿಂದ 2025ರವರೆಗೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ 2,974 ತಪಾಸಣೆಗಳನ್ನು ಮಾಡಲಾಗಿದೆ.ಹೋಟೆಲ್, ಗ್ಯಾರೇಜ್,ತೋಟದ ಲೈನ್ ಮನೆಗಳಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ವಿಶೇಷ ತಪಾಸಣೆ ಕಾರ್ಯಮಾಡಲಾಗಿದೆ.ಕಳೆದ ಎಂಟು ವರ್ಷಗಳಲ್ಲಿ ಜಿಲ್ಲೆಯ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ 72 ಮಕ್ಕಳಲ್ಲಿ 32 ಮಕ್ಕಳನ್ನು ರಕ್ಷಣೆ ಮತ್ತು ಪೋಷಣೆಯ ಉದ್ದೇಶದಿಂದ ಮಕ್ಕಳ ‌ಕಲ್ಯಾಣ ಸಮಿತಿ ಮೂಲಕ ಸರ್ಕಾರಿ ಬಾಲ ಮಂದಿರಗಳಲ್ಲಿ ಪುನರ್ ವಸತಿ ನೀಡಲಾಗಿದೆ.ಬಾಕಿ 40 ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ.ಪ್ರತೀ ತಿಂಗಳು ಸದರಿ ಮಕ್ಕಳ ಅನುಸರಣೆ ಮಾಡಲಾಗುತ್ತಿದೆ.ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಪತ್ತೆಯಾಗಿರುವ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಮಕ್ಕಳು ಜೀತ ಕಾರ್ಮಿಕ ಹಾಗೂ ಬಾಲ್ಯ ವಿವಾಹಕ್ಕೆ ಒಳಗಾಗಿರುವುದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಿದ್ದಾರೆ.

ಏಕ ಪೋಷಕರು,ಮನೆಯಲ್ಲಿ ಬಡತನವೇ ಕಾರಣ!

ಕೊಡಗು ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಪತ್ತೆಯಾಗಿರುವ ಬಾಲ ಕಾರ್ಮಿಕರಲ್ಲಿ ಬಹುತೇಕ ಮಕ್ಕಳಿಗೆ ಏಕ ಪೋಷಕರು ಇರುವುದು ಕಂಡು ಬಂದಿದೆ.ಮನೆಯಲ್ಲಿ ಬಡತನದಿಂದ ವಿದ್ಯೆಯಿಂದ ವಂಚಿತರಾಗಿ, ಬಾಲ್ಯಾವಸ್ಥೆಯಲ್ಲೇ ಅನಿವಾರ್ಯವಾಗಿ ದುಡಿಮೆಗೆ ಇಳಿದಿದ್ದಾರೆ.ತಂದೆ ಇದ್ದರೆ ತಾಯಿ ಇರಲ್ಲ,ತಾಯಿ ಇದ್ದರೆ ತಂದೆ ಇರಲ್ಲ ಎಂಬಿತ್ಯಾದಿ ಕಾರಣಗಳಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿರುವ ಕಾರಣದಿಂದಾಗಿ ಮಕ್ಕಳು ದುಡಿಯುತ್ತಿದ್ದಾರೆ.14 ವರ್ಷದ ಕೆಳಗಿನ ಮಕ್ಕಳನ್ನು ದುಡಿಸಿಕೊಳ್ಳಬಾರದು ಎಂಬ ನಿಯಮ ಇದ್ದರು ಕೂಡ, ಮಕ್ಕಳಿಗೆ ಕಡಿಮೆ ಸಂಬಳ ಕೊಟ್ಟರೆ ಸಾಕು ಎಂಬ ನೆಪವೊಡ್ಡಿ ಮಕ್ಕಳನ್ನು ದಿನಸಿ ಅಂಗಡಿ,ಹೋಟಲ್ ಹಾಗೂ ತೋಟಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ.ಅದಲ್ಲದೇ ಕೊಡಗು ಜಿಲ್ಲೆಯಲ್ಲಿ ಬಾರ್ ನಲ್ಲಿ ಕೂಡ ಬಾಲ ಕಾರ್ಮಿಕರು ದುಡಿಯುವುದು ಪತ್ತೆಯಾಗಿದೆ.ಬಾಲ್ಯಾವಸ್ಥೆಯಲ್ಲಿ ಮಕ್ಕಳು ಶಾಲೆ ಬಿಟ್ಟು ದುಡಿಮೆಯತ್ತ ಕಾಲಿಡುತ್ತಿರುವುದರಿಂದ ಸಣ್ಣ ಪ್ರಾಯದಲ್ಲೇ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಬಾರ್ ನಲ್ಲಿ ಪತ್ತೆಯಾಗಿದ್ದ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರು ಮದ್ಯಪಾನದ ಚಟಕ್ಕೆ ದಾಸರಾಗಿದ್ದರು ಎಂಬ ಆಘಾತಕಾರಿ ಸಂಗತಿ ಕೂಡ ಬೆಳಕಿಗೆ ಬಂದಿದೆ.

ಕೊಡಗು ಜಿಲ್ಲೆಯಲ್ಲಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಜಿಲ್ಲಾ ಕಾರ್ಮಿಕ ಇಲಾಖೆ ಪ್ರಕರಣ ದಾಖಲಿಸಿ ಜೆಎಂಎಫ್.ಸಿ‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಪುನರ್ವಸತಿ ಕಲ್ಯಾಣ ನಿಧಿ ಯೋಜನೆಯಡಿ ಅರ್ಹ ಮಕ್ಕಳ ಹೆಸರಿನಲ್ಲಿ 35,000 ರೂಗಳಂತೆ ಸ್ಥಿರ ಠೇವಣಿ ಕೂಡ ಇರಿಸಲಾಗಿದೆ.ಎಸ್.ಸಿ.ಎಸ್.ಪಿ ಟಿಎಸ್.ಪಿ ಯೋಜನೆಯಡಿ 27 ಮಕ್ಕಳಿಗೆ ಕಲಿಕಾ ಸಾಮಾಗ್ರಿ ಹಾಗೂ ಆಹಾರ ಕಿಟ್ ಕೂಡ ಜಿಲ್ಲಾ ಕಾರ್ಮಿಕ‌ ಇಲಾಖೆಯಿಂದ ನೀಡಲಾಗಿದೆ.

ಕಾನೂನು ಏನೇಳುತ್ತೆ!

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರೆಂಟ್ ರಹಿತ ಬಂಧಿಸಬಹುದಾದ) ಅಪರಾಧವಾಗಿದೆ.ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾರೂ. 20,000/- ರಿಂದ ರೂ. 50,000/-ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಲಘು ಶಿಕ್ಷಾ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ ರೂ. 10,000/-ಗಳ ದಂಡವನ್ನು ವಿಧಿಸಬಹುದಾಗಿರುತ್ತದೆ.ಗೌರವಾನ್ವಿತ ಭಾರತದ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ 465/1986ರಲ್ಲಿ ನೀಡಿರುವ ನಿರ್ದೇಶನದನ್ವಯ ತಪ್ಪಿತಸ್ಥ ಮಾಲೀಕರು ತಾವು ನಿಯೋಜಿಸಿಕೊಂಡ ಪ್ರತಿ ಮಗುವಿಗೆ ರೂ. 20,000/-ಗಳನ್ನು ಬಾಲ್ಯವಸ್ಥೆಯ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ಪುನರ್ವಸತಿ ಕಲ್ಯಾಣ ನಿಧಿ ಯೋಜನೆಗೆ ಪಾವತಿಸಬೇಕಾಗುತ್ತದೆ.

ಜಿಲ್ಲಾ ಹಣ ತಾಲ್ಲೂಕು ಮಟ್ಟಗಳಲ್ಲಿ ಟಾಸ್ಕ್ ಫೋರ್ಸ್ ವಿಶೇಶ ತಂಡಗಳನ್ನು ರಚಿಸಿ ಜಿಲ್ಲೆಯಲ್ಲಿನ ಅಂಗಡಿ,ಹೋಟೆಲ್, ಗ್ಯಾರೇಜ್,ಕಲ್ಲು ಕ್ವಾರೆ,ಕೈಗಾರಿಕೆ,ತೋಟಗಳು,ಮನೆ ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ನಿರಂತರವಾಗಿ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ.ಕೊಡಗು ಜಿಲ್ಲೆಯಲ್ಲಿ ಬಾಲ್ಯಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ.ಕೊಡಗು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಇಲಾಖೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.ಆರ್.ಶೀರಾಝ್ ಅಹ್ಮದ್, ಯೋಜನಾ ನಿರ್ದೇಶಕರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಕೊಡಗು ಜಿಲ್ಲೆ.