‘ಅಕ್ಷರ ಸೇವೆಗೆ ಭಾವಪೂರ್ಣ ನಮನ:ನಿವೃತ್ತ ಶಿಕ್ಷಕಿ ನವೋಮಿ ಕೃಪಾಲತ ಅವರಿಗೆ ಅಭೂತಪೂರ್ವ ಬೀಳ್ಕೊಡುಗೆ
ಕೊಡ್ಲಿಪೇಟೆ: ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಿತ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ದೊಡ್ಡಕೊಡ್ಲಿ ಸರ್ಕಾರಿ ಶಾಲೆಯ ಸಹ ಶಿಕ್ಷಕಿ ನವೋಮಿ ಕೃಪಾಲತ ಅವರ ನಿವೃತ್ತಿ ಅಂಗವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಕಾರ್ಯಕ್ರಮಕ್ಕೆ ಪಾಸ್ಟರ್: ಫ್ರೆಡ್ಡಿ ಕೊಡ್ಲಿಪೇಟೆ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಿಕ್ಷಕಿ ಚೈತ್ರಲೇಖ ಪ್ರಾಸ್ತಾವಿಕವಾಗಿ ಮಾತನಾಡಿ, ನವೋಮಿ ಕೃಪಾಲತ ಅವರ ಶಿಕ್ಷಣ ಸೇವೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಹಾಗೂ ಅನೇಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ ನೀಡಿದ ನೆರವನ್ನು ಸ್ಮರಿಸಿದರು. ಅವರು ಕೇವಲ ಶಿಕ್ಷಕಿಯಾಗಿಯೇ ಅಲ್ಲ, ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶಿ ಮತ್ತು ಪ್ರೇರಣೆಯಾಗಿದ್ದರು ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ನಾಗರಾಜ್ ಮಾತನಾಡಿ, “ಶಿಕ್ಷಣ ಇಲಾಖೆ ಎಲ್ಲ ಇಲಾಖೆಗಳಿಗೂ ತಾಯಿಯಾಗಿದೆ. ಉತ್ತಮ ಶಿಕ್ಷಕರಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಕರ ನಿಸ್ವಾರ್ಥ ಸೇವೆಯೇ ದೇಶದ ಭವಿಷ್ಯವನ್ನು ರೂಪಿಸುತ್ತದೆ,” ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಹೆಚ್.ಎನ್. ಮಂಜುನಾಥ್ ಮಾತನಾಡಿ, “ಸುಮಾರು 14 ವರ್ಷಗಳ ಕಾಲ ಒಂದೇ ಕುಟುಂಬದ ಸದಸ್ಯರಂತೆ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇವೆ. ಪರಸ್ಪರ ಸಹಕಾರ, ವಿಶ್ವಾಸ ಮತ್ತು ಬಾಂಧವ್ಯದೊಂದಿಗೆ ಎಲ್ಲ ಸವಾಲುಗಳನ್ನು ಎದುರಿಸಿದ್ದೇವೆ. ನವೋಮಿ ಕೃಪಾಲತ ಅವರ ಸರಳತೆ, ಸೇವಾ ಮನೋಭಾವ ಮತ್ತು ಕರ್ತವ್ಯನಿಷ್ಠೆ ಸದಾ ನಮ್ಮೆಲ್ಲರಿಗೂ ಮಾದರಿಯಾಗಿರುತ್ತದೆ,” ಎಂದು ಸ್ಮರಿಸಿದರು.
ಎಸ್.ಕೆ.ಎಸ್. ಶಾಲೆಯ ಕಾರ್ಯದರ್ಶಿ ದಿವಾಕರ್, ಸಹ ಶಿಕ್ಷಕರಾದ ರಾಜಪ್ಪ, ಕೊಡ್ಲಿಪೇಟೆ ಕ್ಲಸ್ಟರ್ ವಲಯದ ಶಿಕ್ಷಕರ ಪರವಾಗಿ ಡಿ.ಎಲ್. ಮೂರ್ತಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್ ಹಾಗೂ ಹಾಲಿ ಎಸ್‌ಡಿಎಂಸಿ ಅಧ್ಯಕ್ಷ ವಸಂತ್ ಸೇರಿದಂತೆ ಹಲವರು ಶುಭ ಹಾರೈಸಿದರು.
ಕೊಡ್ಲಿಪೇಟೆ ಕ್ಲಸ್ಟರ್ ವಲಯದ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಕೆ. ಯತೀಶ್, ಶಿಕ್ಷಕರ ಸಂಘದ ನಿರ್ದೇಶಕ ಶಶಿಕುಮಾರ್, ಕೊಡಗು ಜಿಲ್ಲಾ ವೀರಶೈವ ಸಂಘದ ಉಪಾಧ್ಯಕ್ಷ ಪ್ರವೀಣ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮೆರುಗು ಹೆಚ್ಚಿಸಿದರು.
ನಿವೃತ್ತ ಶಿಕ್ಷಕಿ ನವೋಮಿ ಕೃಪಾಲತ ತಮ್ಮ ಸೇವಾ ಪಯಣದ ಅನುಭವಗಳನ್ನು ಹಂಚಿಕೊಂಡು, ಶಾಲೆಯ ಆಡಳಿತ ಮಂಡಳಿ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ನೀಡಿದ ಪ್ರೀತಿ, ಸಹಕಾರ ಮತ್ತು ಗೌರವಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆಯಾಗಿ ಬೇರೆಡೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಹೆಚ್.ಎನ್. ಮಂಜುನಾಥ್ ಹಾಗೂ ರಾಜಪ್ಪ ಅವರನ್ನು ಶಾಲೆ ಮತ್ತು ಎಸ್‌ಡಿಎಂಸಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ನಿವೃತ್ತ ಶಿಕ್ಷಕಿ ನವೋಮಿ ಕೃಪಾಲತ ಅವರಿಗೂ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಗೌರವಿಸಿ ಭಾವಪೂರ್ಣವಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮವನ್ನು ಎಸ್. ಎಂ. ಸುರೇಶ್ ನಿರೂಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
