ಮಡಿಕೇರಿಯಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ; ಏಪ್ರಿಲ್ 18–19 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜನೆ

ಮಡಿಕೇರಿಯಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ;  ಏಪ್ರಿಲ್ 18–19 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜನೆ

ಮಡಿಕೇರಿ: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ(ರಿ) ಹಾಗೂ ಮಡಿಕೇರಿ ತಾಲ್ಲೂಕು ಮೊಗೇರ ಸೇವಾ ಸಮಾಜದ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟವನ್ನು ಮಡಿಕೇರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ.

ಸಮುದಾಯದ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಈ ಕ್ರೀಡಾಕೂಟವು ಏಪ್ರಿಲ್ 18 ಮತ್ತು 19, 2026ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯದ ಅನೇಕ ಭಾಗಗಳಿಂದ ಮೊಗೇರ ಸಮುದಾಯದ ನೂರಾರು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

 ಎರಡು ದಿನಗಳ ಕಾಲ ನಡೆಯಲಿರುವ ಈ ರಾಜ್ಯಮಟ್ಟದ ಕ್ರೀಡೋತ್ಸವದಲ್ಲಿ ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಹಾಗೂ ಮಹಿಳೆಯರಿಗೆ ಥ್ರೋ ಬಾಲ್,ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದೆ. ಈ ವರ್ಷದ ಕ್ರೀಡಾಕೂಟಕ್ಕೆ "ಮಹಾ ನಾಯಕ ಟ್ರೊಫಿ” ಎಂಬ ಘೋಷವಾಕ್ಯವನ್ನು ಅಳವಡಿಸಿಕೊಂಡಿದ್ದು, ಸಮುದಾಯದಲ್ಲಿ ನಾಯಕತ್ವ, ಶಿಸ್ತು, ಏಕತೆ ಹಾಗೂ ಕ್ರೀಡಾ ಮನೋಭಾವನೆ ಬೆಳೆಸುವುದು ಇದರ ಪ್ರಧಾನ ಉದ್ದೇಶವಾಗಿದೆ.

 ಕ್ರೀಡೆಯ ಮೂಲಕ ಯುವಜನತೆಯನ್ನು ಆರೋಗ್ಯಕರ ಜೀವನಶೈಲಿಯತ್ತ ಪ್ರೇರೇಪಿಸಿ, ಮಾದಕ ವಸ್ತುಗಳು ಹಾಗೂ ಅಸಾಮಾಜಿಕ ಚಟುವಟಿಕೆಗಳಿಂದ ದೂರವಿಡುವ ಸಾಮಾಜಿಕ ಸಂದೇಶವನ್ನೂ ಈ ಕ್ರೀಡಾಕೂಟ ನೀಡಲಿದೆ. ಕಾರ್ಯಕ್ರಮದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಸಮಾಜದ ಹಿರಿಯರು, ಗಣ್ಯರು,ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಯೊಂದು ಕ್ರೀಡಾ ಸ್ಪರ್ಧೆಯ ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳು, ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

 ಕ್ರೀಡಾಕೂಟದ ಯಶಸ್ಸಿಗಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಕ್ರೀಡಾಂಗಣದ ಸಜ್ಜಿಕೆ, ಆಟಗಾರರಿಗೆ ಊಟೋಪಚಾರ, ಆರೋಗ್ಯ ಸೇವೆ ವಿಶೇಷ ಗಮನ ನೀಡಲಾಗಿದೆ. ಸಮುದಾಯದ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಚಂದ್ರ – 98457 32488 ಪ್ರಕಾಶ್ – 79751 03368 ಸುರೇಶ್ – 99028 34198 ರಮೇಶ್ – 94834 87528 ಕ್ರೀಡೆಯ ಮೂಲಕ ಸಮುದಾಯದ ಏಕತೆ ಮತ್ತು ಶಕ್ತಿಯನ್ನು ಪ್ರದರ್ಶಿಸುವ ಉದ್ದೇಶದಿಂದ ನಡೆಯಲಿರುವ ಈ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ ಮಡಿಕೇರಿಯಲ್ಲಿ ವಿಶೇಷ ಗಮನ ಸೆಳೆಯಲಿದೆ.

ವರದಿ;ಅಶೋಕ್ ಮಡಿಕೇರಿ