ಬೇದ ಚಂಗ್ರಾಂದಿಯಂದು ಜರುಗಿದ ಅದ್ಧೂರಿ “ಕೊಡವ ಪೊಮ್ಮಕ್ಕಡ ನಾಳ್”;ಯುಕೊ ಪರಿಕಲ್ಪನೆಯಲ್ಲಿ ನಡೆದ ಮೊದಲ ವರ್ಷದ ಕೊಡವ ಮಹಿಳಾದಿನಾಚರಣೆ

Feb 14, 2026 - 16:31
 0  369
ಬೇದ ಚಂಗ್ರಾಂದಿಯಂದು ಜರುಗಿದ ಅದ್ಧೂರಿ “ಕೊಡವ ಪೊಮ್ಮಕ್ಕಡ ನಾಳ್”;ಯುಕೊ ಪರಿಕಲ್ಪನೆಯಲ್ಲಿ ನಡೆದ ಮೊದಲ ವರ್ಷದ ಕೊಡವ ಮಹಿಳಾದಿನಾಚರಣೆ

ಪೊನ್ನಂಪೇಟೆ; ಯುಕೊ ಸಘಟನೆಯ ನೇತೃತ್ವದಲ್ಲಿ “ಜಾಗತಿಕ ಕೊಡವ ಹೆಣ್ಣುಮಕ್ಕಳ ದಿನ”ವನ್ನು, ಬೇದ ಚಂಗ್ರಾಂದಿ ಹಿನ್ನಲೆಯೊಂದಿಗೆ ಕಿರುಗೂರಿನ ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಘಟನೆಗಾಗಿ ನಿಯೋಜಿತ ಜಾಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

 ಮೊದಲಿಗೆ, ಯುಕೊ ಸಂಘಟನೆಯ ನೇತೃತ್ವದಲ್ಲಿ, ಕೊಡವ ಮಹಿಳೆಯರೆಲ್ಲಾ ಕಿರುಗೂರಿನ ನಿಯೋಜಿತ ಯುಕೊ ಸಂಘಟನೆಯ ಕೇಂದ್ರ ಸ್ಥಳದಲ್ಲಿ ಸೇರಿ, ಸಾಂಪ್ರದಾಯಿಕವಾಗಿ ನೆಲ್ಲಕ್ಕಿಯಲ್ಲಿ ನಿಂತು ಪ್ರಾರ್ಥಿಸಿ, ನಂತರ ಕಿರುಗೂರಿನ ಚೆಪ್ಪುಡಿರ ಸುಜು ಕರುಂಬಯ್ಯನವರ ಭತ್ತದ ಗದ್ದೆಗೆ ತೆರಳಿ, ನಡು ಬೇದ ಸಂಪ್ರದಾಯದಂತೆ ಹೆಂಗಳೆಯರೆಲ್ಲಾ ಸೇರಿ ಭೂಮಿಗೆ 'ತೋರ ತೊಪ್ಪು' ಎಂದು ಕರೆಯಲ್ಪಡುವ ವಿಶೇಷ ಎಲೆಯಲ್ಲಿ ಅಕ್ಕಿಯನ್ನು ಇಟ್ಟು, ಭೂಮಿಗೆ ಕೈ ಎಣ್ಣೆ ಸುರಿದು, ಪಕ್ಕದಲ್ಲಿ ಮಿಳ್ಳಿಯಲ್ಲಿ ನೀರು, ಮರದ ಬಾಚಣಿಕೆಯನ್ನಿಟ್ಟು " ಭೂಮಿತಾಯಿ, ನೀಡ ಉಟ್ಟಿ ಮಂಡೆ ಕಾಂಜದ್ ತಂಪಾಡ್, ಕುಂಬ್ಯಾತ್ ಮಳೆಯಾಯಿತ್, ಕುಂದ್'ಲೂ ಕೂಳಾಡ್" ಎಂದು ಸೂರ್ಯದೇವನಿಗೆ ಅಕ್ಕಿಯನ್ನು ಪ್ರೋಕ್ಷಣೆಮಾಡಿ, ಭೂಮಿತಾಯಿಯ ಪಾದ ಮುಟ್ಟಿ ನಮಸ್ಕರಿಸಿ ಪ್ರಾರ್ಥಿಸಲಾಯಿತು.

ಆ ನಂತರ ಕಿರುಗೂರಿನ ಯುಕೊ ಸಂಘಟನೆಯ ನಿಯೋಜಿತ ಸ್ಥಳದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಯುಕೊ ಅಧ್ಯಕ್ಷರಾದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಈ ಬೇದ ಚಂಗ್ರಾಂದಿ ಆಚರಣೆಯಲ್ಲಿ ಹೆಣ್ಣುಮಕ್ಕಳೇ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಆಚರಣೆಯು ‘ ಮಣ್ಣ್ ಮನಸ್ಥಾನಕ್ಕೆ’ ವಿಶೇಷ ಆದ್ಯತೆಯನ್ನು ನೀಡುವ ಕೊಡವ ಜನಾಂಗ ಮತ್ತು ಪ್ರಕೃತಿ ನಡುವಿನ ಭಾವನಾತ್ಮಕ ಸಂಬಂಧವನ್ನು ದೃಡಪಡಿಸುತ್ತದೆ. ಭೂಮಿತಾಯಿಗೆ ಸಾಕ್ಷಾತ್ ಹೆಣ್ಣಿನ ಸ್ಥಾನವನ್ನು ನೀಡಿ, ಬೇದ ಚಂಗ್ರಾಂದಿಯ ಮೂರು ದಿನ ಆಕೆಗೆ ಮುಟ್ಟಿನ ದಿನವೆಂಬ ನಂಬಿಕೆಯೊಂದಿಗೆ, ಆ ದಿನಕ್ಕೆ ಸಂಬಂದಿಸಿದಂತೆ ಹೆಣ್ಣಿಗೆ ಮಾಡುವ ಆರೈಕೆಯನ್ನು ಭೂಮಿತಾಯಿಗೆ ಮಾಡುವುದೇ ನಡುಬೇದ ಆಚರಣೆಯ ಪ್ರಾಮುಖ್ಯತೆಯಾಗಿದೆ.

 ಮಹಿಳೆಯರೇ ಸಾಂಪ್ರದಾಯಿಕವಾಗಿ ಈ ಆಚರಣೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದು ಈ ಆಚರಣೆಯ ವಿಶೇಷ, ಹಾಗೆಯೇ ಈ ಆಚರಣೆಯು ಕೊಡವ ಮಹಿಳೆಯರ ಆರೋಗ್ಯ ಹಾಗು ಆರೈಕೆಯ ದೃಷ್ಟಿಯಿಂದಲೂ, ಹೆಣ್ಣು ಹಾಗು ಭೂಮಿಯ ಫಲವತ್ತತೆಯ ದೃಷ್ಠಿಯಿಂದಲೂ ಮಹತ್ವ ಪಡೆದುಕೊಂಡಿರುವುದರಿಂದ 'ನಡುಬೇದ ಚಂಗ್ರಾಂದಿ' ಆಚರಿಸುವ ಫೆಬ್ರವರಿ 12ನೇಯ ತಾರಿಕನ್ನು ಕಳೆದ ವರ್ಷ ಘೋಷಿಸಿದಂತೆ ಇಂದು “ಜಾಗತಿಕ ಕೊಡವ ಹೆಣ್ಣುಮಕ್ಕಳ ದಿನ”ವಾಗಿ ಆಚರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

 ಕೊಡವ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಹಾಗು ರಾಜಕೀಯ ಅಸ್ತಿತ್ವವನ್ನು ಒಳಗೊಂಡ ಕೊಡವಾಮೆಯನ್ನು ಉಳಿಸಿ ಬೆಳೆಸುವ ನಿರಂತರ ಪ್ರಕ್ರೀಯೆಯ ಭಾಗವಾಗಿ, ಕಳೆದ 7 ವರ್ಷಗಳಿಂದ ಯುಕೊ ಸಂಘಟನೆಯ ವತಿಯಿಂದ ಈ ಬೇದ ಚಂಗ್ರಾಂದಿ ಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ಜನಾಂಗದ ದೈಹಿಕ,ಮಾನಸಿಕ ಹಾಗು ಭಾವನಾತ್ಮಕ ಶಕ್ತಿ ವೃದ್ಧಿಸಿ, ಆಧ್ಯಾತ್ಮಿಕ ಶಕ್ತಿಯೂ ಜಾಗೃತವಾಗುವಾಗುವುದರೊಂದಿಗೆ ಪ್ರಕೃತಿಯೊಂದಿಗೆ ಸಮತೋಲನವನ್ನು ಕಾಪಾಡಿಕೊಂಡು ಕೊಡವ ಜನಾಂಗದ ಪರಂಪರೆಯ ಅಸ್ಥಿತ್ವವನ್ನು ಉಳಿಸಿಕೊಂಡು ಬೆಳೆಸಿಕೊಳ್ಳ ಬಹುದಾಗಿದೆ ಎಮದು ಅವರು ಮಾಹಿತಿ ನೀಡಿದರು.

 ಈ ನಿಟ್ಟಿನಲ್ಲಿ, ಯುಕೊ ಸಂಘಟನೆಯು ನಡೆಸಿಕೊಂಡು ಬಂದಿರುವ ವಿವಿದ ಕಾರ್ಯಕ್ರಮಗಳಿಂದ ಪ್ರೇರಿತರಾಗಿ, ಇಂದು ಯುವಜನತೆ ಕೊಡವಾಮೆಯನ್ನು ಪೋಷಿಸುವ ನಿಟ್ಟಿನಲ್ಲಿ ಆಸಕ್ತಿ ತೋರುವಂತಾಗಿದೆ. ಕೊಡವರು ಕೊಡವಾಮೆಯನ್ನು ಹೆಚ್ಚು ಪ್ರೀತಿಸುವಂತಾಗಿದೆ, ಯುವ ಜನತೆ ಕ್ರಮೇಣ ಮರಳಿ ಕೊಡವ ಸಂಪ್ರದಾಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಪರಿವರ್ತನೆಯ ಹಾದಿಯಲ್ಲಿ ನಮ್ಮ ಅವಿರತ ಶ್ರಮ ಇದೆ ಎಂದು ಅವರು ತಿಳಿಸಿದರು.

 ನಮ್ಮ ಹಿರಿಯರು ನಮ್ಮ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಲು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸುವುದರ ಮೂಲಕ ನಾವು ನಮ್ಮ ಬದುಕಿನ ಹಾದಿಯನ್ನು ಸುಗಮವಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ ಪರಂಪರೆಯನ್ನು ಗೌರವಿಸಿ, ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ, ಗೌರವ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ಕಾಳಿಮಾಡ ಶಿವಪ್ಪ,ಕೊಡವ ಜನಾಂಗಕ್ಕೆ ಜಾಗತಿಕವಾಗಿ ಗೌರವ ಮನ್ನಣೆ ಸಿಗುತ್ತಿದೆಯೆಂದರೆ ಅದಕ್ಕೆ ನಮ್ಮ ಮಣ್ಣು ಮನಸ್ಥಾನವಂಬ ಅಸ್ಥಿತ್ವವೇ ಮೂಲ ಕಾರಣ.

ಕೊಡವರಲ್ಲಿನ ಬುದ್ಧಿವಂತಿಕೆ, ಚತುರತೆ, ಸತ್ಯ, ನಿಷ್ಠೆ. ಸೌಂದರ್ಯ, ಎಲ್ಲದರಲ್ಲೂ ನಮ್ಮ ಮಣ್ಣು ಮನಸ್ಥಾನಗಳ ಪ್ರಭಾವವಿದೆ. ನಮ್ಮ ಸಂಪ್ರದಾಯಗಳನ್ನು ಅಲವಡಿಸಿಕೊಳ್ಳುವುದರ ಮೂಲಕ ನಮ್ಮ ಜೀವಿತವನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ, ಬೇದವೆಂಬ ಪದವನ್ನು ನಾವು ಕೇಳುತ್ತಾ ಬೆಳೆದಿದ್ದೇವೆ, ಆದರೆ ಮಹತ್ವ ತಿಳಿದಿರಲಿಲ್ಲ. ಒಂದು ಜನಾಂಗದ ಅಸ್ಥಿತ್ವವು ಆ ಜನಾಂಗದ ಪರಂಪರೆಗಳ ಪರಿಪಾಲನೆಯ ಮೇಲೆ ಅವಲಂಬಿತವಾಗಿರುತ್ತದೆ.

 ಈ ನಿಟ್ಟಿನಲ್ಲಿ ಬೇದ ಚಂಗ್ರಾಂದಿಯಂತಹ ಆಚರಣೆಗಳು ಕೊಡವಾಮೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನಿವಾರ್ಯವೆನಿಸುತ್ತದೆ ಎಂದು ಅಬಿಪ್ರಾಯ ವ್ಯಕ್ತಪಡಿಸಿದರು. ಕೊಡವರು, ಪ್ರಕೃತಿಯನ್ನು ಸಂಬಂದಗಳ ಬೆಸುಗೆಯೊಂದಿಗೆ ಭಾವನಾತ್ಮಕವಾಗಿಯೇ ನೋಡುವುದಾಗಿದೆ ಹಾಗಾಗಿ ಈ ಮಣ್ಣಿಗೂ ಕೊಡವರಿಗೂ ಅವಿನಾಬಾವ ಸಂಬಂದವಿದೆ. ಈ ಮಣ್ಣು ಕೊಡವರನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ, ಆದರೆ ನಾವು ಕೊಡವರೇ ಬಲವಂತವಾಗಿ ಈ ಮಣ್ಣಿನಿಂದ ದೂರವಾದರೆ ಬದುಕು ದುಸ್ತರವಾಗಬಹುದು ಎಂದು ಹೇಳಿದರು. ಬೇದ ಚಂಗ್ರಾಂದಿ ಭೂಮಿಯ ಫಲವತ್ತತೆಯ ಮಹತ್ವವನ್ನು ಹೊಂದಿದೆ. ಹಾಗೆಯೇ ನಮ್ಮ ಕೊಡವ ಮಹಿಳೆಯರ ಹಾಗು ಪುರುಷರು ತಮ್ಮ ದೈಹಿಕವಾಗಿ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

 ಸಭೆಯಲ್ಲಿ, ವಿರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್, ಮೂರ್ನಾಡು ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪಳಂಗಂಡ ರೇಖ, ತೂಕ್ ಬೊಳಕ್ ಕಲೆ ಕ್ರೀಡೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಮದೋಶ್ ಪೂವಯ್ಯ, ಪೊಂಬೊಳ್ಚ ಕೂಟದ ಅಧ್ಯಕ್ಷ ಮೇ. ಬಿದ್ದಂಡ ನಾಣಿ ದೇವಯ್ಯ, ಮೊದಲಾದವರು ಮಾತನಾಡಿದರು ಸಭೆಯಲ್ಲಿ, ವಿರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಸದಸ್ಯರು, ಮೂರ್ನಾಡ್ ಕೊಡವಸಮಾಜ ಪೊಮ್ಮಕ್ಕಡ ಕೂಟದ ಸದಸ್ಯರು, ಪೊನ್ನಂಪೇಟೆ ಕೊಡವಸಮಾಜದ ನಿರ್ದೇಶಕಿ ಮೂಕಳೆರ ಕಾವ್ಯ ಮಧು, ಟಿ. ಶೆಟ್ಟಿಗೇರಿ ಕೊಡವಸಮಾಜದ ನಿರ್ದೇಶಕ ಕೋಟ್ರಮಾಡ ಸುಮಂತ್, ಶೀತಲ್, ಮೂಕಳೇರ ಪಟ್ಟು ಲೀಲಾವತಿ, ಕೂಕಂಡ ಲತ, ಸಾಹಿತಿ ಕಬ್ಬಚ್ಚೀರ ರಶ್ಮಿ, ಕೋಟೆರ ಉದಯ್ ಪೂಣಚ್ಚ, ಉದ್ಯಮಿ ಕಾಳೇಂಗಡ ಜಗತ್, ನೀನ ಜಗತ್, ಸೋಮೆಯಂಡ ರೇಶ ತಿಮ್ಮಯ್ಯ, ಮುಕ್ಕಾಟಿರ ಬೀನ ಪ್ರಸನ್ನ, ಕಾಳಿಮಾಡ ಕಾವ್ಯ ನಿರನ್, ಚಟ್ಟಂಗಡ ಗೀತ, ರಮಾ, ಪೊಂಬೊಳ್ಚ ಕೂಟದ ಸದಸ್ಯರು, ಬಾಗವಹಿಸಿದ್ದರು.

ಯುಕೊ ಹಾಗು ವಾಯ್ಸ್ ಆಫ್ ಕೊಡವ ಸದಸ್ಯರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಚೆಪ್ಪುಡಿರ ಸುಜುಕರುಂಬಯ್ಯ ಸ್ವಾಗತಿಸಿ ವಂದಿಸಿದರು. ವಿಶೇಷ ಕೊಡವ ಸಾಂಪ್ರದಾಯಿಕ ಬೋಜನವು ಗಮನ ಸೆಳೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0