ಕುಳ್ಳಗಿದ್ದಾನೆಂಬ ಕಾರಣಕ್ಕೆ ಮದುವೆಯಾದ ಹತ್ತೇ ದಿನಕ್ಕೆ ಬಾವನನ್ನು ಇರಿದು ಮರ್ಯಾದೆಗೇಡು ಹತ್ಯೆ!

Oct 11, 2025 - 18:10
 0  3.2k
ಕುಳ್ಳಗಿದ್ದಾನೆಂಬ ಕಾರಣಕ್ಕೆ ಮದುವೆಯಾದ ಹತ್ತೇ ದಿನಕ್ಕೆ ಬಾವನನ್ನು ಇರಿದು ಮರ್ಯಾದೆಗೇಡು ಹತ್ಯೆ!
Photo credit: Etv bharath

ಗುಂಟೂರು (ಆಂಧ್ರ ಪ್ರದೇಶ): ಪ್ರೇಮ ವಿವಾಹಗಳ ವಿರುದ್ಧ ಕುಟುಂಬದ ವಿರೋಧದಿಂದ ಅನೇಕ ಮರ್ಯಾದಾ ಹತ್ಯೆಗಳು ನಡೆದಿರುವುದು ಹೊಸದಲ್ಲ. ಆದರೆ ಗುಂಟೂರಿನಲ್ಲಿ ವರನ ಎತ್ತರವೇ ಹತ್ಯೆಗೆ ಕಾರಣವಾದ ಅಸಹ್ಯ ಘಟನೆ ವರದಿಯಾಗಿದೆ. ಮದುವೆಯಾದ ಕೇವಲ ಹತ್ತೇ ದಿನಗಳಲ್ಲಿ ಕುಳ್ಳಗಿದ್ದಾನೆಂಬ ಕಾರಣಕ್ಕೆ ಬಾವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಬಾಪಟ್ಲ ಜಿಲ್ಲೆಯ ವೇಮೂರು ಮಂಡಲದ ಯಡವೂರುಕು ಗ್ರಾಮದ ಕುರ್ರಾ ನಾಗ ಗಣೇಶ್ (25) ಗುಂಟೂರು ವಿದ್ಯುತ್ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಶಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಗಣೇಶ್ ಅವರ ಪೋಷಕರು ಇತ್ತೀಚೆಗೆ ತೆನಾಲಿ ಸಮೀಪದ ಕೊಲಕಲೂರಿನ ಕೀರ್ತಿ ಅಂಜನೀದೇವಿ ಎಂಬ ಸಂಬಂಧಿಯ ಮನೆಗೆ ವಧು ನೋಡಲು ತೆರಳಿದ್ದರು. ಇಬ್ಬರಿಗೂ ಪರಸ್ಪರ ಇಷ್ಟವಾದರೂ, ಗಣೇಶ್ ಕುಳ್ಳಗಿದ್ದಾನೆಂಬ ಕಾರಣದಿಂದ ಯುವತಿಯ ಪೋಷಕರು ಮದುವೆಯನ್ನು ನಿರಾಕರಿಸಿದ್ದರು.

ಆದರೆ ಗಣೇಶ್ ಮತ್ತು ಕೀರ್ತಿ ಮೊಬೈಲ್‌ ಮೂಲಕ ಸಂಪರ್ಕದಲ್ಲಿದ್ದು, ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದರು. ಕುಟುಂಬದ ವಿರೋಧದ ನಡುವೆಯೇ ಅಮರಾವತಿಯ ದೇವಸ್ಥಾನವೊಂದರಲ್ಲಿ ಇಬ್ಬರೂ ವಿವಾಹವಾದರು. ನಂತರ ನಲ್ಲಪಾಡು ಪೊಲೀಸ್ ಠಾಣೆಯಲ್ಲಿ ಯುವತಿ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು. ಪೊಲೀಸರು ಎರಡೂ ಕುಟುಂಬಗಳಿಗೆ ಕೌನ್ಸೆಲಿಂಗ್ ಮಾಡಿ ಕಳುಹಿಸಿದ್ದರು.

 ಆದರೆ ಯುವತಿಯ ಅಣ್ಣ ದುರ್ಗಾರಾವ್ ಈ ಮದುವೆಯನ್ನು ಒಪ್ಪಿಕೊಳ್ಳದೇ, ಗಣೇಶ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ. “ನಿನ್ನ ಕಥೆ ಮುಗಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದ ಆತ, ಹತ್ತೇ ದಿನಗಳ ನಂತರ ಆ ಬೆದರಿಕೆಯನ್ನು ನಿಜವನ್ನಾಗಿ ಮಾಡಿದ್ದಾನೆ.

ಗಣೇಶ್ ತನ್ನ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಬ್ಯಾಂಕಿನಲ್ಲಿ ಚಿನ್ನಾಭರಣ ಗಿರವಿ ಇಟ್ಟು ಹಣ ತೆಗೆದುಕೊಂಡು ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುರ್ಗಾರಾವ್ ಹಾಗೂ ಇನ್ನಿಬ್ಬರು ಮಾರ್ಗ ಮಧ್ಯೆ ತಡೆದು ದಾಳಿ ನಡೆಸಿದರು. ಗಣೇಶ್ ಮನವರಿಕೆ ಮಾಡಲು ಯತ್ನಿಸಿದರೂ, ದುರ್ಗಾರಾವ್ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆಮಾಡಿದ್ದಾನೆ ಎಂದು ತಿಳಿದು ಬಂದಿದೆ.

ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ಗಣೇಶ್‌ ರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.ಮ ದುವೆಯಾದ ಕೇವಲ ಹತ್ತೇ ದಿನಗಳಲ್ಲೇ ಮಗನನ್ನು ಕಳೆದುಕೊಂಡ ಪೋಷಕರು ಮತ್ತು ಪತ್ನಿ ಕೀರ್ತಿ ಆಕ್ರಂದನದಲ್ಲಿ ಮುಳುಗಿದ್ದರು.

“ದುರ್ಗಾರಾವ್ ತನ್ನ ಸಹೋದರಿಯನ್ನು ತನ್ನ ಒಪ್ಪಿಗೆಯಿಲ್ಲದೆ ಗಣೇಶ್ ಮದುವೆಯಾಗಿದ್ದಾನೆಂಬ ಕೋಪದಿಂದ ಈ ಹತ್ಯೆಯನ್ನು ಸ್ನೇಹಿತರ ಸಹಾಯದಿಂದ ಮಾಡಿದ್ದಾನೆ. ಆರೋಪಿಯ ವಿರುದ್ಧ ಈಗಾಗಲೇ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ,” ಎಂದು ಗುಂಟೂರು ಪೂರ್ವ ಡಿಎಸ್‌ಪಿ ಅಬ್ದುಲ್ ಅಝೀಝ್ ಈ ಘಟನೆಯ ಬಗ್ಗೆ ಮಾಹಿತಿ ನೀಡಿದರು.

What's Your Reaction?

Like Like 1
Dislike Dislike 2
Love Love 0
Funny Funny 0
Angry Angry 2
Sad Sad 7
Wow Wow 0