ವಿಮಾ ಹಣಕ್ಕಾಗಿ ಹೆತ್ತವರು, ಪತ್ನಿಯನ್ನೇ ಕೊಲೆ ಮಾಡಿದ ವ್ಯಕ್ತಿ! | ಬಂಧಿತ ಆರೋಪಿ ಕುಟುಂಬದವರ ಮೇಲೆ ಮಾಡಿಸಿದ್ದ ವಿಮಾ ಹಣವೆಷ್ಟು ಗೊತ್ತೇ?
ನವದೆಹಲಿ: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಹತ್ಯೆ ಮತ್ತು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕೋಟ್ಯಂತರ ರೂಪಾಯಿಗಳ ವಿಮಾ ಹಣಕ್ಕಾಗಿ ತನ್ನ ತಂದೆ, ತಾಯಿ ಮತ್ತು ಪತ್ನಿಯನ್ನು ಕೊಂದು, ಅವರ ಸಾವನ್ನು ರಸ್ತೆ ಅಪಘಾತವೆಂದು ಬಿಂಬಿಸಿದ್ದ ಆರೋಪದ ಮೇಲೆ ವಿಶಾಲ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಿವಾ ಬುಪಾ ವಿಮಾ ಕಂಪೆನಿಯ ಪ್ರತಿನಿಧಿಯ ದೂರಿನ ಆಧಾರದಲ್ಲಿ ಹಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ವಂಚನೆ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ.
ಮುಖೇಶ್ ಸಿಂಘಾಲ್ (ಕುಮಾರ್ ನ ತಂದೆ), ಪ್ರಭಾ ದೇವಿ (ತಾಯಿ) ಹಾಗೂ ಪತ್ನಿ ಬಲಿಯಾಗಿದ್ದು, ಎಲ್ಲರ ಹೆಸರಿನಲ್ಲಿ ಅನೇಕ ಕಂಪೆನಿಗಳಿಂದ ವಿಮಾ ಪಾಲಿಸಿಗಳನ್ನು ಖರೀದಿಸಲಾಗಿತ್ತು. ಆರೋಪಿಯ ವಾರ್ಷಿಕ ಆದಾಯ ಕೇವಲ 12–15 ಲಕ್ಷ ರೂ.ಗಳಷ್ಟಿದ್ದರೂ, ಪಾಲಿಸಿಗಳ ಒಟ್ಟು ಮೊತ್ತ ಸುಮಾರು 39 ಕೋಟಿ ರೂ.ಗಳಷ್ಟಿತ್ತು. ಎಲ್ಲ ಪಾಲಿಸಿಗಳಲ್ಲೂ ಕುಮಾರ್ ನಾಮಿನಿ ಆಗಿದ್ದರು.
2017ರಲ್ಲಿ ತಾಯಿ ಪ್ರಭಾ ದೇವಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂದು ತೋರಿಸಿ 80 ಲಕ್ಷ ರೂ. ಪಡೆದಿದ್ದ. ಪತ್ನಿಯ ಸಾವಿನ ನಂತರ 30 ಲಕ್ಷ ರೂ. ಪಡೆದಿದ್ದ. 2024ರಲ್ಲಿ ತಂದೆಯ ಸಾವು ಕೂಡ ಅಪಘಾತವೆಂದು ದಾಖಲಿಸಿ ವಿಮಾ ಹಣ ಪಡೆಯಲು ಯತ್ನಿಸಿದ್ದರು. ಈಗಾಗಲೇ ಸುಮಾರು 1 ಕೋಟಿ ರೂ. ವಿವಿಧ ವಿಮಾ ಕಂಪೆನಿಗಳಿಂದ ಪಡೆದಿರುವುದು ಬಹಿರಂಗವಾಗಿದೆ.
ನಕಲಿ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಗಳನ್ನು ಬಳಸಿ ಪಾಲಿಸಿಗಳು ತೆರೆದಿರುವುದು ಪತ್ತೆಯಾಗಿದೆ. ತನಿಖೆಗೆ ಸಹಕರಿಸದೆ, ಅಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸಿರುವುದೂ ದೃಢಪಟ್ಟಿದೆ.
ಈ ಪ್ರಕರಣದಲ್ಲಿ ಕುಮಾರ್ ಜೊತೆಗೆ ಆತನ ಸಹಚರ ಸತೀಶ್ ಕುಮಾರ್ ನನ್ನೂ ಪೊಲೀಸರು ಬಂಧಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
2
Sad
4
Wow
1
