ಅಗ್ನಿವೀರ್ ಯೋಧ ಯೋಗೇಶ್ವರ್‌ಗೆ ಅಜಿಲ ಸಮುದಾಯದಿಂದ ಸನ್ಮಾನ

Jul 16, 2026 - 14:51
 0  166
ಅಗ್ನಿವೀರ್ ಯೋಧ ಯೋಗೇಶ್ವರ್‌ಗೆ ಅಜಿಲ ಸಮುದಾಯದಿಂದ ಸನ್ಮಾನ

ವಿರಾಜಪೇಟೆ: ಅಗ್ನಿವೀರ್’ ಯೋಧನಾಗಿ ಆಯ್ಕೆಯಾಗಿ, ಪಂಜಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಬಿಟ್ಟಂಗಾಲದ ಬಿಎಸ್‌ಎನ್‌ಎಲ್ ಉದ್ಯೋಗಿ ಲಕ್ಷ್ಮಿ ರಾಜಪ್ಪ ಅವರ ಪುತ್ರ, ಯೋಗೇಶ್ವರ್ ಅವರನ್ನು ಕೊಡಗಿನ ಅಜಿಲ ಸಮುದಾಯದಿಂದ ಸನ್ಮಾನಿಸಿ ಗೌರವಿಸಿದರು.

ವೀರಾಜಪೇಟೆ ಬಳಿಯ ಕೊಟ್ಟೋಳಿಯ ದೇವಯ್ಯ ಅವರ ಮನೆಯಂಗಳದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಯೋಗೇಶ್ವರ್ ಅವರನ್ನು ಶಾಲು, ಪೇಟ, ಹಾರ ಮತ್ತು ಫಲ ತಾಂಬೂಲದೊಂದಿಗೆ ಸನ್ಮಾನಿಸಿ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಬಾಬು ಅಜಿಲ ಮಾತನಾಡಿ, ಯೋಗೇಶ್ವರ್ ಅವರು ದೇಶಸೇವೆಗಾಗಿ ಆಯ್ಕೆಯಾಗಿರುವದು ಸಮುದಾಯಕ್ಕೆ ಹೆಮ್ಮೆ ತಂದಿದೆ ಎಂದರು. 

ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರಲ್ಲಿರುವ ಪ್ರತಿಭೆಗಳನ್ನು ಹೊರತರಲು ಶ್ರಮಿಸಬೇಕು. ಜೊತೆಗೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಉತ್ಸಾಹಿ ಯುವಕ ಯೋಗೇಶ್ವರ್ ಅಗ್ನಿವೀರ್ ಯೋಧನಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವದು, ಉಳಿದ ಯುವಕರಿಗೆ ಮಾದರಿ ಎಂದು ಅವರು ಹೇಳಿದರು.

ಯೋಧ ಯೋಗೇಶ್ವರ್ ತಾಯಿ ಲಕ್ಷ್ಮಿ ಮಾತನಾಡಿ, ಎಲ್ಲ ಸನ್ಮಾನಕ್ಕಿಂತಲೂ ಸಮುದಾಯದವರಿಂದ ಸಿಕ್ಕಿದ ಗೌರವದಿಂದ ಹೃದಯ ತುಂಬಿ ಬಂದಂತಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಯೋಗೇಶ್ವರ್, ನನ್ನನ್ನು ಗೌರವಿಸಲು ಸಮುದಾಯ ಬಾಂಧವರು ಒಂದಾದಂತೆ, ಮುಂದೆ ಕೂಡಾ ಪ್ರತಿಯೊಬ್ಬರ ನೋವು ನಲಿವುಗಳಲ್ಲಿ ಪಾಲ್ಗೊಂಡು ಒಗ್ಗಟ್ಟು ಮೆರೆಯಬೇಕೆಂದು ಕಿವಿಮಾತು ಹೇಳಿದರು.

 ಸಮಾರಂಭದಲ್ಲಿ ಕುಟುಂಬದ ಹಿರಿಯರಾದ ದೇವಯ್ಯ, ಉಷಾ ದೇವಯ್ಯ, ಜಾಜಿ, ಜಲಜಾ ಬಾಬು ಮತ್ತಿತರರು ಹಾಜರಿದ್ದರು. ಆರಂಭದಲ್ಲಿ ಪುರುಷ ಸ್ವಾಗತಿಸಿದರು. ಜಯಂತಿ ಪ್ರಾರ್ಥಿಸಿ, ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮವನ್ನು ಆನಂದ್ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0