ರಂಗಸಮುದ್ರ ಗ್ರಾಮದಲ್ಲಿ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ; ಬರಿಗಾಲಲ್ಲಿ ಕೆಂಡ ಕೊಂಡ ಹಾಯ್ದ ಭಕ್ತರು
ಕುಶಾಲನಗರ : ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರವೇರಿತು. ತಾ.6 ರಂದು ಸೋಮವಾರ ಬೆಳಗ್ಗೆ 7-30 ರಿಂದ ಆರಂಭವಾದ ದೇವರ ಧಾರ್ಮಿಕ ವಿಧಿಗಳು ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೂ ನಿರಂತರವಾಗಿ ನಡೆದವು.
ಸೋಮವಾರ ಸಂಜೆ ಗ್ರಾಮದ ಕಲ್ಲೇಗೌಡರ ಜಾನಕಿ ಮನೆಯಿಂದ ದೇವರ ಕಳಸವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ರಾತ್ರಿ 8 ಗಂಟೆಗೆ ಗ್ರಾಮದ ಜೆ.ಜಿ. ಚಂದ್ರಶೇಖರ್ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ಪೂಜಿಸಲಾಯಿತು. ಸೋಮವಾರ ರಾತ್ರಿ ಗ್ರಾಮದ ಕುಂಭನ ಬೆಳ್ಯಪ್ಪ ಕುಟುಂಬಸ್ಥರಿಂದ ಪೂಜಾ ಪ್ರಸಾದ ಅನ್ನದಾನ ನಡೆಯಿತು. ರಾತ್ರಿ 9-30 ಗಂಟೆಗೆ ದೇವರ ಗಂಗಾಸ್ನಾನಕ್ಕೆ ತೆರಳಲು ದೇವರ ಅಪ್ಪಣೆ ಪಡೆಯಲಾಯಿತು.
ಮಂಗಳವಾರ ಮುಂಜಾನೆ 4 ಗಂಟೆಯಿಂದ ದೇವಾಲಯದ ಆವರಣದಲ್ಲಿ ಕೆಂಡಕೊಂಡದ ಪೂಜೆ ಆರಂಭವಾಯಿತು. ಮುಂಜಾನೆ 5 ಗಂಟೆಗೆ ದೇವರಿಗೆ ಅಭಿಷೇಕ ಪೂಜೆ. ಬೆಳಗ್ಗೆ 9 ಗಂಟೆಗೆ ವಾದ್ಯ ಮೇಳ, ಅಲಂಕೃತ ದೇವರ ಪಲ್ಲಕ್ಕಿ ಉತ್ಸವದೊಂದಿಗೆ ಗ್ರಾಮದ ಕಾಫಿ ಬೆಳೆಗಾರ ಮುರುಳಿ ಮಾದಯ್ಯ ಅವರ ತೋಟದ ವ್ಯಾಪ್ತಿಯಲ್ಲಿ ಚಿಕ್ಲಿಹೊಳೆ ಹಾಗೂ ಕಾವೇರಿ ನದಿಯ ಸಂಗಮದಲ್ಲಿ ಗಂಗಾಸ್ನಾನ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು.
ನಂತರ ದೇವರ ಪಲ್ಲಕ್ಕಿ ಮೆರವಣಿಗೆ ಕಾವೇರಿ ನದಿಯಿಂದ ಆರಂಭಗೊಂಡು ದೇವಾಲಯದವರೆಗೂ ಸಾಗಿ ಬಂತು. ಈ ಸಂದರ್ಭ ರಂಗಸಮುದ್ರ, ವಿರೂಪಾಕ್ಷಪುರ, ಕಬ್ಬಿನಗದ್ದೆ ವ್ಯಾಪ್ತಿಯ ಆದಿವಾಸಿಗಳು ಸೇರಿದಂತೆ ಸಮಸ್ತ ಭಕ್ತಜನರು ಪಾಲ್ಗೊಂಡು ಪುನೀತರಾದರು. ಮಧ್ಯಾಹ್ನ 2 ಗಂಟೆಯಿಂದ ಕೆಂಡ ಕೊಂಡ ಪೂಜೆ ನಡೆಯಿತು. ಈ ಸಂದರ್ಭ ಗ್ರಾಮದ ನಿಂಗರಾಜು, ಮಧು ಹಾಗೂ ಲೋಕನಾಥ ಅವರ ಮೇಲೆ ಜೋಡಿ ಬಸವೇಶ್ವರ ಹಾಗೂ ಸುಗ್ಗಿ ದೇವರು ಆವಾಹನೆಗೊಂಡು ಕುಣಿದು ಕುಪ್ಪಳಿಸಿ ದೇವಾಲಯದ ಮುಂಬದಿಯಲ್ಲಿ ಅಳವಡಿಸಲಾಗಿದ್ದ ಕೆಂಡದ ಬೆಂಕಿ ಕೊಂಡವನ್ನು ಬರಿಗಾಲಲ್ಲಿ ಹಾಯ್ದು ಭಕ್ತಿ ಸಮರ್ಪಿಸಲಾಯಿತು.
ನಂತರ ಮಹಾಮಂಗಳಾರತಿ ಹಾಗೂ ಭಂಡಾರ ಹಾಕಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಪದಾಧಿಕಾರಿಗಳು ಆವಾಹಿತ ದೇವ ಭಕ್ತರಲ್ಲಿ ಈ ಬಾರಿ ಮಳೆ ಬೆಳೆ ಉತ್ತಮಗೊಂಡು ರೈತರ ಬೆಳೆಗಾರರ ಬದುಕು ಹಸನು ಮಾಡು ಎಂದು ಬೇಡಿದರು. ಇದೇ ಸಂದರ್ಭ ದೇವಾಲಯಕ್ಕೆ ಆಗಮಿಸಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಪಾದಪೂಜೆ ದೇವಾಲಯದ ಆವರಣದಲ್ಲಿ ನೆರವೇರಿಸಲಾಯಿತು.
ಬಳಿಕ ನೆರೆದ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು. ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಎ.ಜಿ.ಚಿಣ್ಣಪ್ಪ, ಗೌರವಾಧ್ಯಕ್ಷ ಜೆ.ಜಿ.ಚಂದ್ರಶೇಖರ್, ಕಾರ್ಯದರ್ಶಿ ಕೆ.ಟಿ.ಧನಂಜಯ, ನಿರ್ದೇಶಕರಾದ ವಿ.ಹೆಚ್.ಸುಭಾಷ್, ಎನ್.ಪಿ.ನವೀನ್, ಕೆ.ಎಸ್.ಚಂದ್ರಶೇಖರ್, ಜೆ.ಕೆ.ಮುತ್ತುರಾಜ್, ಎನ್.ಪಿ.ಕುಶಾಲಪ್ಪ, ಎನ್.ಡಿ.ಪ್ರಕಾಶ್, ಪಿ.ಎಸ್.ಬಸಪ್ಪ,ಪಿ.ಬಿ.ಅಶೋಕ್, ಪಿ.ಎಸ್.ಮೋಹನ್ ಹಾಗೂ ಅರ್ಚಕ ಶಿವಕುಮಾರ್ ಇದ್ದರು.