ಬೆಂಗಳೂರು: ಎಟಿಎಂ ಹಣ ದರೋಡೆ; ಇನ್ನಿಬ್ಬರ ಬಂಧನ, ₹6.29 ಕೋಟಿ ಜಪ್ತಿ | ಮೂರು ತಿಂಗಳಿನಿಂದ ಸಂಚು ರೂಪಿಸಿದ್ದ ಆರೋಪಿಗಳು

ಬೆಂಗಳೂರು: ಎಟಿಎಂ ಹಣ ದರೋಡೆ; ಇನ್ನಿಬ್ಬರ ಬಂಧನ, ₹6.29 ಕೋಟಿ ಜಪ್ತಿ | ಮೂರು ತಿಂಗಳಿನಿಂದ ಸಂಚು ರೂಪಿಸಿದ್ದ ಆರೋಪಿಗಳು
Photo credit: Etv bharath

ಬೆಂಗಳೂರು: ನಗರದಲ್ಲಿ ಎಟಿಎಂ ಯಂತ್ರಗಳಿಗೆ ತುಂಬಿಸಲು ಸಾಗಿಸುತ್ತಿದ್ದ ಹಣ ದರೋಡೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಪೊಲೀಸರು ಬಲೆಗೆ ಬಿದ್ದಿದ್ದಾರೆ. ಚೆನ್ನೈನಲ್ಲಿದ್ದ ದಿನೇಶ್ ಮತ್ತು ಜಿನೇಶ್ ಎಂಬವರನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಂತಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದಕ್ಕೂ ಮುನ್ನ ಸಿಎಂಎಸ್‌ ಸೆಕ್ಯುರಿಟೀಸ್‌ನ ಕಸ್ಟೋಡಿಯನ್ ವಾಹನ ಮೇಲ್ವಿಚಾರಕ ಗೋಪಾಲ್ ಪ್ರಸಾದ್, ಮಾಜಿ ಉದ್ಯೋಗಿ ಕ್ಸೇವಿಯರ್, ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್, ನವೀನ್, ನೆಲ್ಸನ್ ಮತ್ತು ರವಿ ಬಂಧಿತರಾಗಿದ್ದರು. ಪ್ರಕರಣದಲ್ಲಿ ಇದುವರೆಗೆ ₹6.29 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ. ಹೊಸದಾಗಿ ಬಂಧಿತರಾದವರ ಬಳಿಯಿಂದ ಹಣ ಪತ್ತೆಯಾಗದಿದ್ದರೂ, ಬೇರೆಡೆ ಇಟ್ಟಿರುವ ಬಗ್ಗೆ ಆರೋಪಿಗಳು ನೀಡಿರುವ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎಂದು ಆಯುಕ್ತರು ಹೇಳಿದ್ದಾರೆ.

ನವೆಂಬರ್‌ 19ರಂದು ಡೈರಿ ಸರ್ಕಲ್ ಫ್ಲೈಓವರ್‌ ಬಳಿ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ತಂಡವು ಎಟಿಎಂ ಗೆ ಹಣ ಸಾಗಿಸುತ್ತಿದ್ದ ವಾಹನವನ್ನು ತಡೆದು ₹7.11 ಕೋಟಿ ಹಣವಿದ್ದ ಪೆಟ್ಟಿಗೆಯನ್ನು ದೋಚಿಕೊಂಡು ಪರಾರಿಯಾಗಿತ್ತು. ಘಟನೆ ನಡೆದ ಕ್ಷಣದಿಂದಲೇ ಗಡಿಭಾಗ ಜಿಲ್ಲೆಗಳ ಎಸ್‌ಪಿಗಳು ಹಾಗೂ ನೆರೆಯ ರಾಜ್ಯದ ಪೊಲೀಸರಿಗೆ ನಗರದ ಪೊಲೀಸ್‌ ಇಲಾಖೆ ಅಲರ್ಟ್‌ ನೀಡಿತ್ತು.

ಇಬ್ಬರು ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ 11 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಸುಮಾರು 200 ಸಿಬ್ಬಂದಿ ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿ, 54 ಗಂಟೆಗಳೊಳಗೆ ಮೂವರ ಬಂಧನ ಹಾಗೂ ₹5.76 ಕೋಟಿ ಹಣ ವಶಪಡಿಸಿದ್ದರು.

ಮೂರು ತಿಂಗಳುಗಳಿಂದ ಸಂಚು ರೂಪಿಸಿ, 15 ದಿನಗಳಿಂದ ಸ್ಥಳ ನಿಗಾವಹಿಸಿ, ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿದ ಕಾರಿನಲ್ಲಿ ಅಶೋಕ ಪಿಲ್ಲರ್–ಜಯನಗರ–ಡೈರಿ ಸರ್ಕಲ್ ಮಾರ್ಗವಾಗಿ ಬಂದು ಎಟಿಎಂ ಗೆ ಹಣ ಸಾಗಿಸುತ್ತಿದ್ದ ವಾಹನವನ್ನು ತಮ್ಮ ವಶಕ್ಕೆ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  

ಉಳಿದ ಹಣದ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.