National News

ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡು ಅಣ್ಣ-ತಂಗಿ ಸಾವು

admincoorgdaily

ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡು ಅಣ್ಣ-ತಂಗಿ ಸಾವು

ವಾರಾಣಸಿ, ಮಾರ್ಚ್ 24: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆ ಕುಸಿದು ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ. ಇಂದು ವಾರಾಣಸಿಯ (Varanasi) ಲಹರ್ತಾರಾ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದ ನಂತರ ಮನೆ ಕುಸಿದು 30 ವರ್ಷದ ವ್ಯಕ್ತಿ ಮತ್ತು ಅವರ ತಂಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ಮನೆ ಕುಸಿದು ಇಡೀ ಕುಟುಂಬದ ಸದಸ್ಯರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು.

ಪೊಲೀಸರು, ಅಗ್ನಿಶಾಮಕ ಸೇವೆಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ತಂಡಗಳು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ಗಿರಿಜಾ ದೇವಿ, ಅವರ ಇಬ್ಬರು ಪುತ್ರರು ಮತ್ತು ಮಗಳನ್ನು ಅವಶೇಷಗಳಿಂದ ಹೊರಗೆಳೆದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಕರೆದೊಯ್ಯಲಾಯಿತು.

ಗಿರಿಜಾ ದೇವಿ ಮತ್ತು ಅವರ ಒಬ್ಬ ಪುತ್ರ ಗಾಯಗೊಂಡಿದ್ದು, ಅವರ ಇನ್ನೊಬ್ಬ ಮಗ ಅಮನ್ ಚೌಧರಿ (30) ಮತ್ತು ಮಗಳು ಪ್ರೀತಿ (28) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ರಾತ್ರಿಯಿಂದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿದ್ದು, ಗಿರಿಜಾ ದೇವಿ ಬೆಳಿಗ್ಗೆ ಸ್ಟೌವ್ ಹಚ್ಚಲು ಹೋದಾಗ ಅದು ಸ್ಫೋಟಗೊಂಡಿದೆ ಎನ್ನಲಾಗಿದೆ.

ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಲಹರ್ತಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಫೋಟ ಎಷ್ಟು ತೀವ್ರವಾಗಿತ್ತು ಎಂದರೆ ಹತ್ತಿರದ ಹಲವಾರು ಮನೆಗಳಲ್ಲಿಯೂ ಬಿರುಕುಗಳು ಉಂಟಾಗಿವೆ. ಭಯಭೀತರಾಗಿ ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದು ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಲು ಒಟ್ಟುಗೂಡಿದರು.