ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ; ರಾಬಿನ್ ದೇವಯ್ಯ
ಮಡಿಕೇರಿ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೂಲಿ ಕೆಲಸ ಮಾಡುವ ಮಕ್ಕಳು ಸಹ ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ಯಾವುದೇ ಕೊರತೆ ಬಗ್ಗೆ ಚಿಂತಿಸದೆ ಶೈಕ್ಷಣಿಕವಾಗಿ ಸಾಧಿಸುವ ಛಲದೊಂದಿಗೆ ಮುಂದುವರೆಯಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬಾಲಭವನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜು.೨೯ರಿಂದ ಜಿಲ್ಲೆಯಲ್ಲಿ ಸಹಕಾರದಿಂದ ಸಮೃದ್ಧಿ ಧ್ಯೇಯದೊಂದಿಗೆ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರೈತರ ಸಮಾವೇಶ, ಸಸಿ ನೆಡುವಿಕೆ, ಸಹಕಾರ ಅರಿವು, ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ, ಸ್ವಚ್ಛತಾ ಕಾರ್ಯಕ್ರಮ, ಹಸುಗಳ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇಂದು ಕೊನೆಯ ದಿನವಾಗಿ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ಕೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಕೊಡುಗೆ ಅಪಾರವಾಗಿದೆ. ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು ಕೂಡಲೇ ಸ್ಪಂದಿಸಿ ಕೊಡುಗೆ ನೀಡಲು ಸೂಚಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದಲೂ ವಿದ್ಯಾರ್ಥಿಗಳಿಗೆ ಪರಿಕರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಭವನ ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ವಿದ್ಯಾರ್ಥಿಗಳ ಅಗತ್ಯತೆಗಳ ಕುರಿತು ಆಗಾಗ್ಗೆ ಚರ್ಚಿಸಲಾಗುತ್ತಿದೆ. ದಾನಿಗಳ ಮೂಲಕ ನೆರವು ಒದಗಿಸುವಲ್ಲಿ ಶ್ರಮಿಸಲಾಗುತ್ತದೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಯೂನಿಯನ್ ವಿದ್ಯಾರ್ಥಿಗಳಿಗೆ ನೆರವು ನೀಡಿರುವುದಕ್ಕೆ ಧನ್ಯವಾದ ತಿಳಿಸಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಬೆಳ್ಳಿಯಪ್ಪ ಮಾತನಾಡಿ, ಬ್ಯಾಂಕ್ ಸ್ಥಾಪನೆಯಾಗಿ ೧೦೫ ವರ್ಷ ಪೂರೈಸಿದ್ದು ಠೇವಣಿ ಸಂಗ್ರಹಣೆ, ಸಾಲ ವಿತರಣೆಯಲ್ಲಿ ಉತ್ತಮ ಪ್ರಗತಿ ಕಂಡಿದೆ. ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಪರಿಕರ ನೀಡುವ ಈ ಮಾದರಿ ಕಾರ್ಯಕ್ರಮದಿಂದ ಮಕ್ಕಳ ಮುಖದಲ್ಲಿ ಸಂತಸ ಮೂಡಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಶೈಲಜ, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಡಿ.ಸಿ.ಸಿ. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಬೋಜಮ್ಮ, ಬಾಲಭವನದ ಗೌರವ ಕಾರ್ಯದರ್ಶಿ ನಮಿತಾ ರೈ, ರೋಟರಿ ಮಾಜಿ ಅಧ್ಯಕ್ಷೆ ಲಲಿತಾ ರಾಘವನ್ ಉಪಸ್ಥಿತರಿದ್ದರು. ಯೂನಿಯನ್ ಸಿಬ್ಬಂದಿ ಬಿ.ಸಿ.ಅರುಣ್ ಕುಮಾರ್, ಬಾಲಭವನದ ಕು.ಸೌಮ್ಯ ಹಾಗೂ ಬಾಲಕರ ಬಾಲಮಂದಿರದ ಸೂರಜ್ ಕಾರ್ಯಕ್ರಮದಲ್ಲಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

