ಫೆ.19 ರಂದು ತೊರೆನೂರು ವಿರಕ್ತಮಠದಲ್ಲಿ ಹಿರಿಯ ಸ್ವಾಮೀಜಿಗಳ ಸಂಸ್ಮರಣೆ ಹಾಗೂ ಧಾರ್ಮಿಕ ಸಮಾರಂಭ

ಫೆ.19 ರಂದು ತೊರೆನೂರು ವಿರಕ್ತಮಠದಲ್ಲಿ  ಹಿರಿಯ ಸ್ವಾಮೀಜಿಗಳ ಸಂಸ್ಮರಣೆ ಹಾಗೂ ಧಾರ್ಮಿಕ ಸಮಾರಂಭ

ಕುಶಾಲನಗರ : ಕುಶಾಲನಗರ ತಾಲ್ಲೂಕಿನ ತೊರೆನೂರು ವಿರಕ್ತ ಮಠದ ಹಿರಿಯ ಶ್ರೀಗಳಾದ ಶ್ರೀ ಮಹಾಂತ ಸ್ವಾಮೀಜಿ ಅವರ 13 ನೇ ವರ್ಷದ ಸಂಸ್ಮರಣೋತ್ಸವ ಸಮಾರಂಭಕ್ಕೆ ಸುತ್ತೂರು ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಆಗಮಿಸಲಿದ್ದಾರೆ ಎಂದು ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ತಿಳಿಸಿದ್ದಾರೆ.

 ಕುಶಾಲನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತೊರೆನೂರು ವಿರಕ್ತ ಮಠ ಶ್ರೀ ಮರುಳ ಸಿದ್ದೇಶ್ವರ ಸ್ವಾಮೀಜಿಯವರ ತಪೋಕ್ಷೇತ್ರವಾಗಿದ್ದು, ಶ್ರೀ ಮಠಕ್ಕೆ ಪುರಾತನವಾದ ಐತಿಹ್ಯ ವಿದೆ. ವಿರಕ್ತಮಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗಳು ಹಾಗೂ ನಿಕಟ ಪೂರ್ವ ಶ್ರೀಗಳಾದ ಶ್ರೀ ಮಹಾಂತ ಸ್ವಾಮೀಜಿ ಯವರ 13ನೇ ವರ್ಷದ ಸಂಸ್ಮರಣೋತ್ಸವ ಫೆ 19 ರಂದು ಪೂರ್ವಾಹ್ನ 10.30 ಗಂಟೆಗೆ ಜರುಗಲಿದೆ.

ಸುತ್ತೂರು ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ಅರಕಲಗೂಡು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಉದ್ಘಾಟಿಸಲಿದ್ದು ಮಡಿಕೇರಿ ಶಾಸಕ ಡಾ.ಮಂತರಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಜಿಲ್ಲೆಯ ವಿವಿಧ ಮಠಗಳ ಮಠಾಧಿಪತಿಗಳು ಆಗಮಿಸಲಿದ್ದು, ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅಶೋಕ್ ಸಂಗಪ್ಪ ಆಲೂರ ಅನುಭಾವ ನುಡಿಗಳಾಡುವರು. ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್. ವಿ. ಶಿವಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಾಗೆಯೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿರುವ ಶಿರಂಗಾಲದ ಎಸ್. ವಿ. ನಂಜುಂಡಪ್ಪ, ಆಲೂರು ಸಿದ್ದಾಪುರದ ಜೆ.ಎಸ್. ವಿರೂಪಾಕ್ಷಯ್ಯ, ಹೆಬ್ಬಾಲೆಯ ಮರೂರಿನ ಹೆಚ್. ವಿ.ಶಿವರುದ್ರಪ್ಪ, ತೊರೆನೂರು ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಜಗದೀಶ್, ಸಮಾಜದ ಸಂಪನ್ಮೂಲ ಶಿಕ್ಷಕಿ ಡಾ. ಜಿ.ಎಂ. ಹೇಮಲತಾ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಮಲ್ಲೇಶ ಸ್ವಾಮೀಜಿ ತಿಳಿಸಿದರು.

ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ತೊರೆನೂರು ವಿರಕ್ತಮಠದಲ್ಲಿ ಜರುಗಲಿರುವ ಹಿರಿಯ ಶ್ರೀಗಳ ಸಂಸ್ಮರಣೋತ್ಸವದಲ್ಲಿ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಎಲ್ಲಾ ಸಮುದಾಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು. ಮಠ ಹಾಗೂ ಭಕ್ತರ ನಡುವೆ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರತಿ ತಿಂಗಳ ಹುಣ್ಣಿಮೆಯಂದು ಚಿಂತನಾಗೋಷ್ಠಿಗಳನ್ನು ಹಮ್ಮಿಕೊಂಡು ಕೃಷಿ, ಆರೋಗ್ಯ, ವಾಣಿಜ್ಯ ,ಶಿಕ್ಷಣ, ವಚನ ಸಾಹಿತ್ಯ ಮೊದಲಾದ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಭಕ್ತರಿಗೆ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಶಿವಪ್ಪ ವಿವರಿಸಿದರು.

 ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಸಾಂಬ ಶಿವಯ್ಯ , ಖಜಾಂಚಿ ಉದಯಕುಮಾರ್, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಎಸ್. ಮೂರ್ತಿ, ಕುಶಾಲನಗರ ತಾಲೂಕು ವೀರಶೈವ ಮಹಾಸಭಾಧ್ಯಕ್ಷ ಹೆಚ್.ಎಂ. ಮಧುಸೂದನ್, ಸಮಾಜದ ಪ್ರಮುಖರಾದ ಎಂ.ಎಸ್. ಗಣೇಶ್ ಇದ್ದರು.