ಗ್ರಾಮೀಣ ಪ್ರದೇಶದಲ್ಲಿನ ಹಿಂದುಳಿದ ವರ್ಗದವರಿಗೆ ಅನುಕೂಲವಾಗುತ್ತಿದ್ದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಕಿತ್ತುಕೊಂಡು ಜನತೆಗೆ ಅನ್ಯಾಯವೆಸಗಿದೆ;ಶಾಸಕ ಎಎಸ್ ಪೊನ್ನಣ್ಣ

Feb 16, 2026 - 22:29
 0  214
ಗ್ರಾಮೀಣ ಪ್ರದೇಶದಲ್ಲಿನ ಹಿಂದುಳಿದ ವರ್ಗದವರಿಗೆ ಅನುಕೂಲವಾಗುತ್ತಿದ್ದ ನರೇಗಾ ಯೋಜನೆಯನ್ನು  ಕೇಂದ್ರ ಸರ್ಕಾರ ಕಿತ್ತುಕೊಂಡು ಜನತೆಗೆ ಅನ್ಯಾಯವೆಸಗಿದೆ;ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ : ನರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿನ ಹಿಂದುಳಿದ ವರ್ಗದವರಿಗೆ ಅನುಕೂಲವಾಗುತ್ತಿತ್ತು. ಇದೀಗ ಇದನ್ನು ಕೇಂದ್ರ ಸರ್ಕಾರ ಕಿತ್ತುಕೊಂಡು ಜನತೆಗೆ ಅನ್ಯಾಯವೆಸಗಿದೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಹೇಳಿದರು.

 ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ನರೇಗಾ ಬಚಾವೋ ಸಂಗ್ರಾಮದ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ನಡೆದ ಪಾದಯಾತ್ರೆಯ ಬಳಿಕ ಕಾರು ನಿಲ್ದಾಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಈ ಮೊದಲಿದ್ದ ಯೋಜನೆಯನ್ನೆ ಸರ್ಕಾರ ಮತ್ತೆ ಜಾರಿಗೊಳಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ. ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ 90 ರಷ್ಟು ಅನುದಾನ ಬರುತ್ತಿತ್ತು. ಇದೀಗ ಅನುದಾನವಿಲ್ಲದಂತಾಗಿದೆ. ದೇಶದ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಕೇಂದ್ರದ ಬಿ.ಜೆ.ಪಿ ಸರ್ಕಾರ ಸಂವಿಧಾನವನ್ನು ಹಾಳುಗೆಡವಿದೆ ಎಂದು ಆರೋಪಿಸಿದರು.

 ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರ ಜನತೆಗೆ ಉಪಯೋಗವಾಗುವ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಈ ಹಿಂದೆ ಕಾಂಗ್ರೆಸ್ ಜಾರಿಗೊಳಿಸಿದ ಜನಪಯೋಗಿ ಯೋಜನೆಗಳನ್ನು ಇದೀಗ ಬಿಜೆಪಿ ಸರ್ಕಾರ ಹಾಳುಗೆಡವುತ್ತಿರುವುದು ದುರದೃಷ್ಟಕರ ಎಂದರು.

ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಅವರು ಮಾತನಾಡಿ ಯೋಜನೆಯಿಂದ ಮಹಾತ್ಮ ಗಾಂಧಿಯ ಹೆಸರನ್ನು ತೆಗೆಯುವ ಹೀನ ಕೆಲಸವನ್ನು ಬಿ.ಜೆ.ಪಿ ಮಾಡಿರುವುದು ಖಂಡನೀಯ ಕಾರ್ಯ. ಯೋಜನೆಯಿಂದ ಜನರಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶದವರಿಗೆ ಅನುಕೂಲವಾಗುತ್ತಿತ್ತು. ಕೇಂದ್ರದಿಂದ ಸಾಕಷ್ಟು ಯೋಜನೆಗಳು ಜಾರಿಯಾಗುತ್ತಿದ್ದರೂ ಜಿಲ್ಲೆಯನ್ನು ತಲುಪುತ್ತಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮಾತನಾಡಿ ಕಾಂಗ್ರೆಸ್‍ನ ಏಳಿಗೆಯನ್ನು ಸಹಿಸದ ಬಿಜೆಪಿ ಕುತಂತ್ರದ ಕೆಲಸ ಮಾಡುತ್ತಿದೆ. ಯೋಜನೆಯ ಜಾರಿಗೆ ಹೋರಾಟ ಅಗತ್ಯ ಎಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಪ್ರಚಾರ ಸಮಿತಿಯ ಟಿ.ಪಿ. ರಮೇಶ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಹಿಳಾ ಸಮಿತಿಯ ಜಿಲ್ಲಾ ಘಟಕದ ರೂಪ ದೇವಯ್ಯ, ಪಿ.ಜಿ ಅಯ್ಯಪ್ಪ, ಟಾಟು ಮೊಣ್ಣಪ್ಪ, ಕೆ.ಬಿ.ಶಾಂತಪ್ಪ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ, ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣ ಕಾವೇರಿ ಕಾಲೇಜಿನ ಬಳಿಯಿಂದ ಪಂಜರಪೇಟೆ, ಸರ್ಕಾರಿ ಬಸ್ ನಿಲ್ದಾಣದ ರಸ್ತೆ, ದೊಡ್ಟಟ್ಟಿ ಚೌಕಿ, ಎಫ್.ಎಂ.ಸಿ ರಸ್ತೆ ಮೂಲಕ ಕಾರು ನಿಲ್ದಾಣದ ವರೆಗೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯ ಉದ್ದಕ್ಕು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಮನರೇಗಾ ಯೋಜನೆಯ ಜಾರಿಗೆ ಒತ್ತಾಯಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0