ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಪ್ರಯುಕ್ತ ದಲಿತ ಸಂಘರ್ಷ ಸಮಿತಿ ವತಿಯಿಂದ ಸ್ವಾಭಿಮಾನಿ ಸಮಾವೇಶ
admincoorgdaily

ಮಡಿಕೇರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆ ಪ್ರಯುಕ್ತ ದಲಿತ ಸಂಘರ್ಷ ಸಮಿತಿ ವತಿಯಿಂದ ಬಾಬಾಸಾಹೇಬ್ ಅನುಯಾಯಿಗಳೊಂದಿಗೆ ಸ್ವಾಭಿಮಾನಿ ಸಮಾವೇಶವನ್ನು ಜನವರಿಯಲ್ಲಿ ನಗರದ ಗಾಂಧಿಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಮಡಿಕೇರಿ ತಾಲೂಕು ಅಧ್ಯಕ್ಷ ದೀಪಕ್ ಪೊನ್ನಪ್ಪ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ ೨ ಗಂಟೆಗೆ ಗಾಂಧಿ ಮೈದಾನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಕಾರ್ಯಕ್ರಮ ಪ್ರಯುಕ್ತ ಬೆಳಗ್ಗೆ ೧೦ ಗಂಟೆಗೆ ಅಶೋಕ್‌ಪುರದಿಂದ ಗಾಂಧಿಮೈದಾನದವರೆಗೆ ಮೆರವಣಿಗೆ ಸಾಗಲಿದೆ. ಕಾರ್ಯಕ್ರಮಕ್ಕೆ ಸುಮಾರು ೫೦೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಂದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ದಲಿತ ರತ್ನ ಪ್ರಶಸ್ತಿ, ಜಿಲ್ಲೆಯ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ ಅವರಿಗೆ ಕೊಡಗು ರತ್ನ ಪ್ರಶಸ್ತಿ, ಹೋರಾಟರ ಜಯಪ್ಪ ಹಾನಗಲ್, ಸಮಾಜ ಸೇವಕ ಡಾ.ಎಚ್.ವಿ.ದೇವದಾಸ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ನೌಕರರರ ಸಮಿತಿಯ ಅಧ್ಯಕ್ಷ ಸಿದ್ದಯ್ಯ ಅವರಿಗೆ ಕೊಡಗು ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ನಗರ ಸಂಚಾಲಕ ಸಿ.ಪಿ.ಸಿದ್ದೇಶ್ವರ್, ಪ್ರೇಮ ಕೃಷ್ಣಪ್ಪ ಇದ್ದರು.