ದಾರಿ ತಪ್ಪಿದ್ದ ಅಥವಾ ನಮ್ಮನ್ನು ದಾರಿ ತಪ್ಪಿಸಿದ್ದಾ?: ಶರಣ್ಯ ಪ್ರಕರಣ ತನಿಖೆಗೆ ಪ್ರಸನ್ನ ಎಡಿಕೇರಿ ಒತ್ತಾಯ

Apr 7, 2026 - 15:21
 0  556
ದಾರಿ ತಪ್ಪಿದ್ದ ಅಥವಾ ನಮ್ಮನ್ನು ದಾರಿ ತಪ್ಪಿಸಿದ್ದಾ?: ಶರಣ್ಯ ಪ್ರಕರಣ ತನಿಖೆಗೆ ಪ್ರಸನ್ನ ಎಡಿಕೇರಿ ಒತ್ತಾಯ

ಮಡಿಕೇರಿ : ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣದ ಸಂದರ್ಭ ನಾಪತ್ತೆಯಾಗಿ ನಾಲ್ಕು ದಿನಗಳ ಬಳಿಕ ಪತ್ತೆಯಾದ ಕೇರಳ ಮೂಲದ ಮಹಿಳೆ ಶರಣ್ಯ ಬಗ್ಗೆ ಸಾಕಷ್ಟು ಅನುಮಾನ ಮೂಡುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ನಿಜಾಂಶವನ್ನು ಜನರ ಮುಂದಿಡಬೇಕೆಂದು ಸಮಾಜ ಸೇವಕ ಪ್ರಸನ್ನ ಎಡಿಕೇರಿ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಏ.2ರಂದು ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಶರಣ್ಯ ನಾಪತ್ತೆಯಾಗಿದ್ದು, ಹುಡುಕಾಟಕ್ಕಾಗಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯರು ಸೇರಿದಂತೆ ಹಲವರು ಕಾರ್ಯಾಚರಣೆ ನಡೆಸಿ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದ್ದಾರೆ. ಶರಣ್ಯ ಪತ್ತೆಗೆ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆ ಮಾಡಲಾಗಿದೆ. ಇದು ನಮ್ಮ ತೆರಿಗೆ ಹಣದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಆದರೆ ಶರಣ್ಯ ಏನು ಸಾಧನೆ ಮಾಡಿದ್ದಾರೆಂದು ಆಕೆಗೆ ಸನ್ಮಾನ ಮಾಡಿದ್ದಾರೆಂದು ಪ್ರಶ್ನಿಸಿದ ಅವರು, ಕಾರ್ಯಾಚರಣೆ ಮಾಡಿ ಪತ್ತೆಯಚ್ಚಿದವರಿಗೆ ಸನ್ಮಾನ ಮಾಡಬಹುದಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶರಣ್ಯ ಯಾವುದೇ ಆಹಾರವಿಲ್ಲದೆ ಒಂದು ಬಾಟಲಿ ನೀರಿನಲ್ಲಿ ನಾಲ್ಕು ದಿನ ಕಳೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಇವರು ನಿಜವಾಗಿಯೂ ಬೆಟ್ಟದಲ್ಲಿ ದಾರಿ ತಪ್ಪಿದ್ದ? ಅಥವಾ ನಮ್ಮನ್ನು ದಾರಿ ತಪ್ಪಿಸಿದ್ದ? ಎಂಬ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸಾಕಷ್ಟು ಟೀಕೆಗಳು ವ್ಯಕ್ತಗೊಂಡಿದ್ದು, ಇದಕ್ಕೆ ಉತ್ತರ ಸಿಗುವಂತಾಗಬೇಕೆಂದು ಒತ್ತಾಯಿಸಿದ್ದಾರೆ.

ಪಕ್ಕದ ಕೇರಳ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಶರಣ್ಯ ನಾಪತ್ತೆ ಪ್ರಕರಣ ಚುನಾವಣಾ ಕೇಂದ್ರಿತವಾದಂತೆ ಗೋಚರಿಸುತ್ತಿದೆ. ಆದ್ದರಿಂದ ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಪ್ರಸನ್ನ ಆಗ್ರಹಿಸಿದ್ದಾರೆ.

ಒಬ್ಬ ಮಹಿಳೆ ಇದ್ದರೂ ಅವರನ್ನು ಬೆಟ್ಟಕ್ಕೆ ಚಾರಣಕ್ಕೆ ತೆರಳಲು ಅವಕಾಶ ಮಾಡಿಕೊಡಲು ಕಾರಣ ಏನು ಎಂಬುದರ ಬಗ್ಗೆ ಸಂಬಂದಿಸಿದ ಅರಣ್ಯ ಇಲಾಖೆ ಮಾಹಿತಿ ನೀಡಬೇಕು. ಆನೆ-ಮಾನವ ಸಂಘರ್ಷ ಸಂದರ್ಭವೂ ಕೊಡಗಿಗೆ ಬಾರದ ಅರಣ್ಯ ಸಚಿವರು ಈ ಬಾರಿಯೂ ಅದೇ ವರ್ತನೆ ಪ್ರದರ್ಶಿಸಿ ಎಲ್ಲಿಂದಲೋ ಹೇಳಿಕೆ ನೀಡಿ ನುಣುಚಿಕೊಳ್ಳುತ್ತಿದ್ದಾರೆಂದು ಪ್ರಸನ್ನ ಆರೋಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0