ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
ಮಡಿಕೇರಿ ಜು.10:-ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಜೆ.ಎಲ್.ಜನಾರ್ಧನ ಅವರು ಅಂಬೇಡ್ಕರ್ ಭವನ ನಿರ್ಮಾಣ ಜಾಗ ಕಾಯ್ದಿರಿಸುವಂತೆ ಹಲವು ಬಾರಿ ಹೇಳಿಕೊಂಡು ಬರಲಾಗಿದೆ. ಆದರೆ ಇದುವರೆಗೆ ಉತ್ತಮ ಜಾಗ ಕಾಯ್ದಿರಿಸಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕೂಡಲೇ ಜಾಗ ಕಾಯ್ದರಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ನಿವೇಶನ ರಹಿತ ಪರಿಷ್ಟರಿಗೆ ಆಯಾಯ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನ ಒದಗಿಸಬೇಕು. ಅರ್ಹ ಬಡಕುಟುಂಬಗಳಿಗೆ ನ್ಯಾಯ ಒದಗಿಸುವುದು ಆದ್ಯತೆಯಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಪರಿಶಿಷ್ಟರಲ್ಲಿ ಹಲವು ಕುಟುಂಬಗಳು ಕೃಷಿ ಸಾಲ ಪಡೆದಿದ್ದು ಎಫ್‍ಐಡಿ ಆಗಬೇಕು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕಿದೆ ಎಂದು ಜನಾರ್ದನ ಅವರು ಕೋರಿದರು.
ಸರ್ಕಾರಿ ಅಭಿಯೋಜಕರಾದ ದೇವೇಂದ್ರ ಅವರು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಸಂಬಂಧಿಸಿದಂತೆ (ಎಸ್‍ಎಸ್‍ಟಿ) ಜಿಲ್ಲಾ ವಿಶೇಷ ನ್ಯಾಯಾಲಯದಲ್ಲಿ 39 ಪ್ರಕರಣಗಳಲ್ಲಿ, ಮೂರು ಪ್ರಕರಣಕ್ಕೆ ವಿಚಾರಣೆಯಾಗಿದ್ದು, ಒಂದು ಪ್ರಕರಣಕ್ಕೆ ಶಿಕ್ಷೆಯಾಗಿದೆ. 11 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಸತೀಶ್, ಜಾಯ್ಸ್ ಮೆನೇಜನ್, ಪಿ.ಪಿ.ಸುಕುಮಾರ್ ಅವರು ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

