ಪ್ರೇಯಸಿಯನ್ನು ಮದುವೆಯಾಗಲು ಯುವಕ ಮಾಡಿದ್ದೇನು ‌ಗೊತ್ತಾ! ಹೀರೋ ಆಗಬೇಕೆಂದಿದ್ದ ಯುವಕ ಜೈಲು ಸೇರಿದ!

ಪ್ರೇಯಸಿಯನ್ನು ಮದುವೆಯಾಗಲು ಯುವಕ ಮಾಡಿದ್ದೇನು ‌ಗೊತ್ತಾ!   ಹೀರೋ ಆಗಬೇಕೆಂದಿದ್ದ ಯುವಕ ಜೈಲು ಸೇರಿದ!
Photo credit: TV09

ತಿರುವನಂತಪುರಂ, ಜನವರಿ 8:ಪ್ರೇಯಸಿಯನ್ನು ಮದುವೆಯಾಗಲು ಆಕೆಯ ಮನೆಯವರನ್ನು ಮೆಚ್ಚಿಸಲು ರಸ್ತೆ ಅಪಘಾತದ ನಾಟಕವಾಡಿದ ಯುವಕನ ಯೋಜನೆ ಪೊಲೀಸರ ತನಿಖೆಯಲ್ಲಿ ಬಯಲಾಗಿ, ಆತ ಹಾಗೂ ಆತನ ಸ್ನೇಹಿತರು ಜೈಲು ಸೇರಿದ ಘಟನೆ ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

ಕೋನ್ನಿ ಸಮೀಪದ ಮಮ್ಮೂಡು ಮೂಲದ ರಂಜಿತ್ ರಾಜನ್ (24) ತನ್ನ ಪ್ರೇಯಸಿಯ ಪೋಷಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸಿ ಮದುವೆಗೆ ಒಪ್ಪಿಗೆ ಪಡೆಯುವ ಉದ್ದೇಶದಿಂದ ಅಪಘಾತವನ್ನು ಪೂರ್ವನಿಯೋಜಿತವಾಗಿ ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆತನ ಸ್ನೇಹಿತ ಅಜೇಶ್ (19) ಸಹ ಆರೋಪಿಯಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಡಿಸೆಂಬರ್ 23ರಂದು ಕೋಚಿಂಗ್ ಸೆಂಟರ್‌ನಿಂದ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಯುವತಿಗೆ, ಅಜೇಶ್ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ನಂತರ ಮತ್ತೊಂದು ವಾಹನದಲ್ಲಿ ಹಾದುಹೋಗುತ್ತಿದ್ದ ರಂಜಿತ್, ತಾನೇ ಯುವತಿಯನ್ನು ರಕ್ಷಿಸಿದಂತೆ ನಾಟಕವಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ಮೂಲಕ ಯುವತಿಯ ಪೋಷಕರ ದೃಷ್ಟಿಯಲ್ಲಿ ಹೀರೋ ಆಗುವುದು ಆತನ ಉದ್ದೇಶವಾಗಿತ್ತು.

ಆದರೆ ಅಪಘಾತದಲ್ಲಿ ಯುವತಿಯ ಮೊಣಕೈ ಹಾಗೂ ಬೆರಳಿಗೆ ಗಾಯಗಳಾಗಿವೆ. ಪ್ರಕರಣದ ಕುರಿತು ಯುವತಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಹಿಟ್‌ಅಂಡ್‌ರನ್ ಪ್ರಕರಣದಲ್ಲಿ ಅಜೇಶ್ ಬಂಧನಕ್ಕೊಳಗಾದ ಬಳಿಕ ನಡೆದ ವಿಚಾರಣೆಯಲ್ಲಿ ಅಪಘಾತವು ಉದ್ದೇಶಪೂರ್ವಕ ಎಂಬುದು ಬಹಿರಂಗವಾಯಿತು.

ಈ ಹಿನ್ನೆಲೆಯಲ್ಲಿ ರಂಜಿತ್ ಹಾಗೂ ಅಜೇಶ್ ವಿರುದ್ಧ ಕೊಲೆ ಯತ್ನ ಸೇರಿದಂತೆ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.