ಮಡಿಕೇರಿಯಲ್ಲಿ ಕಸಾಪ, ಲೇಖಕರ ಬಳಗ ಮತ್ತಿತರ ಸಂಸ್ಥೆಗಳ ವತಿಯಿಂದ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ
ಮಡಿಕೇರಿ, ಜುಲೈ 16: ಮಡಿಕೇರಿ ನಗರದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಗುರುವಾರ( ಜುಲೈ 16 ರಂದು) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು( ಕಸಾಪ ) , ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ, ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ , ಮಡಿಕೇರಿ ತಾಲ್ಲೂಕು ಕಸಾಪ ಘಟಕ ಹಾಗೂ ಸಮರ್ಥ ಕನ್ನಡಿಗರ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ಪತ್ರಿಕಾ ಭವನದಲ್ಲಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಜಾನಕಿ ಅವರ ಅಗಲಿಕೆಗೆ ಅವರು ಹಾಡಿದ ಕನ್ನಡ ಗೀತೆ ಹಾಡುಗಳನ್ನು ಹಾಡಿ ಭಾವ ನಮನ ಸಲ್ಲಿಸಿ ಒಂದು ನಿಮಿಷ ಕಾಲ ಮೌನಾಚರಣೆ ಸಲ್ಲಿಸಲಾಯಿತು. ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನುಡಿ ನಮನ ಸಲ್ಲಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ “ಎಸ್. ಜಾನಕಿ ಅವರ ಆರು ದಶಕಗಳ ಸುದೀರ್ಘ ಸಂಗೀತ ಪಯಣ ಅವಿಸ್ಮರಣೀಯವಾದುದು.
ದಕ್ಷಿಣ ಭಾರತದ ಗಾನಕೋಗಿಲೆ ದಿವಂಗತ ಎಸ್. ಜಾನಕಿ ಅವರ ಅಗಲಿಕೆಯಿಂದ ಕನ್ನಡ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದರು. ಎಸ್.ಜಾನಕಿ ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ” ಎಂದು ಕೇಶವಕಾಮತ್ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಸುಗಮ ಹಾಗೂ ಮಧುರ ಕಂಠದಿಂದ ಕೋಟ್ಯಂತರ ಜನರ ಹೃದಯಗಳನ್ನು ಗೆದ್ದಿರುವ ದಕ್ಷಿಣ ಭಾರತದ ಗಾನ ಕೋಗಿಲೆ ಎಸ್. ಜಾನಕಿ ಅವರು ಸಂಗೀತ ಲೋಕದ ಧ್ರುವತಾರೆ ಎಂದರು.
ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಸುಮಧುರ ಕಂಠದಿಂದ ಸಂಗೀತ ಪ್ರಿಯರ ಮನಗೆದ್ದಿದ್ದಾರೆ. ಎಸ್. ಜಾನಕಿ ಅವರ ಸಂಗೀತ ಕ್ಷೇತ್ರದ ವಿಶೇಷವೆಂದರೆ, ಜಾನಕಿ ಅವರು ಎಲ್ಲಾ ಭಾಷೆಗಳಿಗಿಂತಲೂ ಅತ್ಯಂತ ಹೆಚ್ಚು ಹಾಡುಗಳನ್ನ ಹಾಡಿದ್ದು ಕನ್ನಡ ಚಿತ್ರರಂದಲ್ಲಿ. ಕನ್ನಡ ಭಾಷೆಯಲ್ಲಿ ವರನಟ ಡಾ. ರಾಜ್‌ಕುಮಾರ್, ಪಿ.ಬಿ. ಶ್ರೀನಿವಾಸ್ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಜಾನಕಿ ಅವರು ಹಾಡಿರುವ ಯುಗಳ ಗೀತೆಗಳು ಇಂದಿಗೂ ಸದಾ ಹಸಿರಾಗಿವೆ ಎಂದು ರಮೇಶ್ ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ , ಎಸ್.ಜಾನಕಿಯವರು ತಮ್ಮ ಸಂಗೀತವನ್ನು ವೃತ್ತಿಯಾಗಿರಿಸದೇ ಅದನ್ನು ತಪಸ್ಸಾಗಿ ಸ್ವೀಕರಿಸಿ ತಮ್ಮ ಕಂಠಸಿರಿಯಿಂದ ಕೋಟ್ಯಾಂತರ ಸಂಗೀತ ಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ ಎಂದರು.
ಲೇಖಕರ ಬಳಗದ ಮಾಜಿ ಅಧ್ಯಕ್ಷ ಲೋಕನಾಥ್ ಅಮೆಚೂರ್ ಮಾತನಾಡಿ, ಕನ್ನಡಿಗರ ಮನೆ ಮಾತಾಗಿರುವ ಜಾನಕಿಯವರು ಮಕ್ಕಳ ಧ್ವನಿಯಿಂದ ಹಿಡಿದು ವೃದ್ದರ ಧ್ವನಿಯವರೆಗೆ ಯಾವುದೇ ಪಾತ್ರಕ್ಕೂ ಒಗ್ಗಿಕೊಳ್ಳುತ್ತಿದ್ದ ಅವರ ಗಾಯನ ಶೈಲಿ ಅನನ್ಯವಾಗಿತ್ತು ಎಂದು ಬಣ್ಣಿಸಿದರು.
ಜಿಲ್ಲಾ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮಾಥ್ಯೂ ಮಾತನಾಡಿ, ,"ಗಾನ ಕೋಗಿಲೆ ಗಾಯಕಿ ಎಸ್. ಜಾನಕಿಯವರ ಸಂಗೀತ ಸ್ವರ ಸಂಸ್ಕಾರವು ನಮ್ಮ ಭಾರತ ದೇಶದ ಹೆಮ್ಮೆಯ ಹೃದಯ ಪೂರ್ವಕ ಪ್ರಾಣವಾಗಿದೆ ಎಂದರು.
ಲೇಖಕಿ ಜಲಜಾ ಶೇಖರ್ ಮಾತನಾಡಿ, ಜಾನಕಿಯವರ ಅವರ ಧ್ವನಿಗೆ ಸಾವಿಲ್ಲ. ಅವರ ಹಾಡುಗಳು ಎಂದೆಂದಿಗೂ ಸ್ಥಿರಸ್ಥಾಯಿಯಾಗಿ ಉಳಿಯಲಿವೆ ಎಂದರು. ಎಸ್.ಜಾನಕಿ ಅವರಿಗೆ ನುಡಿ ನಮನ ಸಲ್ಲಿಸಿದ ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಪುದಿನೆರವನ ರೇವತಿ ರಮೇಶ್ ಮಾತನಾಡಿ, ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನ ಹಾಡಿ ಅಪ್ರತಿಮ ದಾಖಲೆ ನಿರ್ಮಿಸಿದ ಜಾನಕಿ ಅವರ ಸಂಗೀತ ಪಯಣದ ಹೆಜ್ಜೆ ನಿಜಕ್ಕೂ ಇತಿಹಾಸ ಸೇರಿದಂತಾಗಿದೆ ಎಂದರು.
ಮಡಿಕೇರಿ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಅಂಬೇಕಲ್ ನವೀನ್ ಮಾತನಾಡಿ, ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ಜಾನಕಮ್ಮ ಅಹಂಕಾರದಿಂದ ದೂರವಿದ್ದು, ಸರಳತೆಯ ಸಾಕಾರಮೂರ್ತಿಯಾಗಿದ್ದರು ಎಂದರು.
ಲೇಖಕರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಜಿಲ್ಲಾ ಕಸಾಪ ಸಮಿತಿಯ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್, ಸಮರ್ಥ ಕನ್ನಡಿಗರ ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಕೆ.ಜಯಲಕ್ಷ್ಮಿ , ಉಪನ್ಯಾಸಕಿ ಪ್ರತಿಮಾ ರೈ, ಲೇಖಕರ ಬಳಗದ ಸಹ ಕಾರ್ಯದರ್ಶಿ ಕೆ.ವಿ.ಉಮೇಶ್, ಸಮಿತಿಯ ಸದಸ್ಯ ನೆರವಂಡ ಉಮೇಶ್, ಕಸಾಪ ಸದಸ್ಯ ಟಿ.ಎಂ.ಕೆ.ವಾಸು ರೈ, ಮಹಿಳಾ ಬರಹಗಾರರ ಸಂಘದ ಪ್ರಮುಖರಾದ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ಕೂಪದೀರ ಸುಂದರಿ ಮಾಚಯ್ಯ, ಕಟ್ರತನ ಲಲಿತಾ ಅಯ್ಯಣ್ಣ, ಚೊಕ್ಕಾಡಿ ಪ್ರೇಮ ರಾಘವಯ್ಯ, ತೆನ್ನಿರಾ ರಾಧಾ ಪೊನ್ನಪ್ಪ ಇತರರು ಇದ್ದರು.
ಭಾವ ನಮನ: ಲೇಖಕರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸಮರ್ಥ ಕನ್ನಡಿಗರ ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಕೆ.ಜಯಲಕ್ಷ್ಮಿ ಉಪನ್ಯಾಸಕಿ ಪ್ರತಿಮಾ ರೈ, ಎಸ್.ಜಾನಕಿ ಅವರು ಹಾಡಿರುವ ಗೀತೆಗಳನ್ನು ಹಾಡಿ ಭಾವ ನಮನ ಸಲ್ಲಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
