ಇನ್‌ಸ್ಟಾಗ್ರಾಂನಲ್ಲಿ ಪರಿಚಯ; ಮದುವೆಯ ಭರವಸೆ ನೀಡಿ ಡಾಕ್ಟರ್‌ ಆಗೋ ಹುಡುಗಿಯಿಂದ ಲಕ್ಷಾಂತರ ರೂ., ಅರ್ಧ ಕೆಜಿ ಚಿನ್ನ ದೋಚಿದ್ದ ನಕಲಿ ಬ್ಯುಸಿನೆಸ್ ಮೆನ್‌ ಬಂಧನ

Nov 26, 2025 - 23:10
 0  1.3k
ಇನ್‌ಸ್ಟಾಗ್ರಾಂನಲ್ಲಿ ಪರಿಚಯ; ಮದುವೆಯ ಭರವಸೆ ನೀಡಿ ಡಾಕ್ಟರ್‌ ಆಗೋ ಹುಡುಗಿಯಿಂದ ಲಕ್ಷಾಂತರ ರೂ., ಅರ್ಧ ಕೆಜಿ ಚಿನ್ನ ದೋಚಿದ್ದ ನಕಲಿ ಬ್ಯುಸಿನೆಸ್ ಮೆನ್‌  ಬಂಧನ
Photo credit: public tv (ಫೋಟೋ: ಬಂಧಿತ ಆರೋಪಿ)

ಬೆಂಗಳೂರು: ವೈದ್ಯೆಯಾಗಬೇಕೆಂದು ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಪ್ರೀತಿ–ಮದುವೆಯ ಹೆಸರಿನಲ್ಲಿ ಲಕ್ಷಾಂತರ ರೂ. ಹಾಗೂ ಅರ್ಧ ಕೆಜಿ ಚಿನ್ನಾಭರಣ ದೋಚಿದ್ದ ನಕಲಿ ಬ್ಯುಸಿನೆಸ್ ಮೆನ್‌ ನನ್ನು ಜ್ಞಾನಭಾರತಿ ಠಾಣೆ ಪೊಲೀಸರ ಬಂಧಿಸಿದ್ದಾರೆ.

ಜನಾರ್ದನ್ ಅಲಿಯಾಸ್‌ ಸಿದ್ಧಾರ್ಥ್‌ ವೀರ್ ಬಂಧಿತ ಆರೋಪಿ.

ಪೊಲೀಸರು ನೀಡಿದ ಮಾಹಿತಿಯಂತೆ, ಇನ್‌ಸ್ಟಾಗ್ರಾಂನಲ್ಲಿ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿ ಸಂಪರ್ಕ ಬೆಳೆಸಿದ ಆರೋಪಿ, ತಾನು ಬ್ಯುಸಿನೆಸ್‌ಮೆನ್‌ ಎಂದು ಸುಳ್ಳು ಪರಿಚಯ ನೀಡಿ ವಿದ್ಯಾರ್ಥಿನಿಯ ವಿಶ್ವಾಸ ಪಡೆದಿದ್ದ. ನಂತರ ಮದುವೆಯಾಗುತ್ತೇನೆ ಎಂಬ ಭರವಸೆಯಲ್ಲಿ ಮನೆಗೆ ಆಗಾಗ ಭೇಟಿ ನೀಡಿ ಆಕೆಯ ನಂಬಿಕೆಯನ್ನು ಗಟ್ಟಿಮಾಡಿಕೊಂಡಿದ್ದ.

‘ಬಾರ್ ಮತ್ತು ರೆಸ್ಟೋರೆಂಟ್’ ಆರಂಭಿಸಲು ಬಂಡವಾಳ ಬೇಕಿದೆ ಎಂಬ ನೆಪದಲ್ಲಿ ಹಂತ ಹಂತವಾಗಿ ಏಳು–ಎಂಟು ಲಕ್ಷ ರೂಪಾಯಿ ವಸೂಲಿ ಮಾಡಿದ್ದ. ಬಳಿಕ ಮತ್ತೊಮ್ಮೆ ಹಣ ಕೇಳುವ ಸಲುವಾಗಿ ಯುವತಿಯ ಮನೆಗೆ ಬಂದು, ಕಾಫಿ ತಯಾರಿಸಲು ಆಕೆ ಕಿಚನ್‌ಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಅರ್ಧ ಕೆಜಿಯಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಸಂಬಂಧಿಕರ ಕಾರ್ಯಕ್ರಮಕ್ಕೆ ಚಿನ್ನಾಭರಣಗಳ ಬಗ್ಗೆ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿನಿ ತಕ್ಷಣ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಪಾಸಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 1
Funny Funny 2
Angry Angry 2
Sad Sad 3
Wow Wow 1