2 ವರ್ಷದ ಮಗಳಿಗೆ ಸಪೋಟ ಹಣ್ಣಿನಲ್ಲಿ ಇಲಿ ಪಾಷಾಣ ಹಾಕಿ ತಿನ್ನಿಸಿದ ತಂದೆ

Mar 26, 2026 - 00:07
 0  1.2k
2 ವರ್ಷದ ಮಗಳಿಗೆ ಸಪೋಟ ಹಣ್ಣಿನಲ್ಲಿ ಇಲಿ ಪಾಷಾಣ ಹಾಕಿ ತಿನ್ನಿಸಿದ ತಂದೆ

ಯದಾದ್ರಿ ಭುವನಗಿರಿ (ತೆಲಂಗಾಣ): ಜಿಲ್ಲೆಯಲ್ಲಿ ಎರಡು ವರ್ಷದ ಬಾಲಕಿಯೊಬ್ಬಳು ಕೌಟುಂಬಿಕ ಕಲಹಕ್ಕೆ ಬಲಿಯಾಗಿದ್ದಾಳೆ. ಸ್ವತಃ ಹೆತ್ತ ತಂದೆಯೇ ಮಗಳಿಗೆ ವಿಷ ನೀಡಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಂಸ್ಥಾನ ನಾರಾಯಣಪುರಂ ಮಂಡಲದ ಲಚಮ್ಮಗುಡೆಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ಮಗು ಸಾವನ್ನಪ್ಪಿದ ನಂತರ ಈ 'ವಿಷ'ಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಗಂಡನಿಂದ ದೂರವಾಗಿದ್ದ ಪತ್ನಿ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ವಾರಿಕುಪ್ಪಳ ರವಿ ಎಂದು ಗುರುತಿಸಲಾದ ಆರೋಪಿಯು ರಂಗಾರೆಡ್ಡಿ ಜಿಲ್ಲೆಯ ಮದ್ಗುಲ ಮಂಡಲದ ನಿವಾಸಿ ಸ್ವಾತಿ ಅವರನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಇಬ್ಬರ ನಡುವೆ ಬಿರುಕಿನಿಂದಾಗಿ ಸ್ವಾತಿ ಅವರು ಕಳೆದ ಮೂರು ತಿಂಗಳಿನಿಂದ ತನ್ನ ಪೋಷಕರ ಮನೆಯಲ್ಲಿ 9 ತಿಂಗಳ ಮಗಳು ಜೊತೆ ವಾಸಿಸುತ್ತಿದ್ದಳು. ಹಿರಿಯ ಮಗಳು ತಂದೆಯ ಜೊತೆ ಇದ್ದಳು.

ಕೌಟುಂಬಿಕ ಕಲಹದಿಂದಾಗಿ ಸ್ವಾತಿ ಅವರು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ, ಹಿರಿಯ ಮಗಳನ್ನೂ ತನಗೆ ಕೊಡಿಸಬೇಕು ಎಂದು ಪೊಲೀಸರನ್ನು ಸಂಪರ್ಕಿಸಿದ್ದರು. ಅದರಂತೆ, ಸೋಮವಾರ (ಮಾರ್ಚ್ 23) ಈ ಸಮಸ್ಯೆಯನ್ನು ಪರಿಹರಿಸಲು ಸಭೆ ನಿಗದಿಯಾಗಿತ್ತು. ಆದರೆ, ಶನಿವಾರ (ಮಾರ್ಚ್ 21) ರವಿ ಅವರು ಸಪೋಟಾ ಹಣ್ಣಿನಲ್ಲಿ ಇಲಿ ವಿಷಪಾಷಾಣ ಬೆರೆಸಿ ತನ್ನ ಹಿರಿಯ ಮಗಳಿಗೆ ಕೊಟ್ಟಿದ್ದಾನೆ. ಅದನ್ನು ಸೇವಿಸಿದ ಆಕೆ ಅತಿಯಾದ ವಾಂತಿಯಿಂದಾಗಿ ನಿತ್ರಾಣಗೊಂಡು ಪ್ರಜ್ಞೆ ಕಳೆದುಕೊಂಡಿದ್ದಾಳೆ.

ಆರೋಪಿಯಿಂದಲೂ ಆತ್ಮಹತ್ಯೆಗೆ ಯತ್ನ: ಇತ್ತ, ರವಿ ಕೂಡ ವಿಷದ ಜೊತೆಗೆ ನಿದ್ರೆ ಮಾತ್ರೆಗಳನ್ನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ನೋಡಿದ ಕುಟುಂಬ ಸದಸ್ಯರು ಆತನನ್ನು ನಲ್ಗೊಂಡದ ಆಸ್ಪತ್ರೆಗೆ ಕರೆದೊಯ್ದರು. ಮಗಳನ್ನು ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ ಸಾವನ್ನಪ್ಪಿದ್ದಾಳೆ.

ಘಟನೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, "ತಾಯಿ (ಸ್ವಾತಿ) ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಉದ್ದೇಶ ಮತ್ತು ಹಿನ್ನೆಲೆ ಸೇರಿದಂತೆ ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುವುದು" ಎಂದು ಹೇಳಿದರು.

ಮಗುವಿನ ಅಂತ್ಯಕ್ರಿಯೆಯನ್ನು ಮಂಗಳವಾರ ಲಚಮ್ಮಗುಡೆಮ್‌ನಲ್ಲಿ ನಡೆಸಲಾಯಿತು. ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 3
Wow Wow 0