ಶನಿವಾರಸಂತೆ;ಗುಡುಗಳಲೆ ಜಾನುವಾರುಗಳ ಜಾತ್ರೋತ್ಸವಕ್ಕೆ ತೆರೆ

ಶನಿವಾರಸಂತೆ;ಗುಡುಗಳಲೆ ಜಾನುವಾರುಗಳ ಜಾತ್ರೋತ್ಸವಕ್ಕೆ ತೆರೆ

ಶನಿವಾರಸಂತೆ:ಫೆ19:-ಹಿದೆ ಹೆಸರುವಾಸಿಯಾಗಿದ್ದ ಗುಡುಗಳಲೆ ಜಾನುವಾರುಗಳ ಜಾತ್ರೆ ಈಗ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕ್ಷೀಣಿಸುತ್ತಿರುವ ಬೆಳವಣಿಗೆಯಲ್ಲಿ ಮುಂದಿನ ದಿನದಲ್ಲಿ ಜಾತ್ರೆಯನ್ನು ರಥೋತ್ಸವಕ್ಕೆ ಬದಲಾವಣೆ ಮಾಡಿದರೆ ಜಾತ್ರಾ ವೈಭವ ಮರುಕಳಿಸಬಹುದು ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಸದಾಶಿವ ಸ್ವಾಮೀಜಿ ಸಲಹೆ ನೀಡಿದರು.

 ಅವರು ಗುಡುಗಳಲೆ ಜಯದೇವ ಜಾತ್ರಾ ಸಭಾಂಗಣದಲ್ಲಿ ನಡೆದ 82ನೇ ವರ್ಷದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಮುಕ್ತಾಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ವೈಜ್ಞಾನಿಕವಾಗಿ ಬದಲಾವಣೆಯಾದಂತೆ ಸಮಾಜ ಮತ್ತು ಮನುಷ್ಯನು ಬದಲಾವಣೆಯಾಗುತ್ತಿರುವ ಸಂದರ್ಭದಲ್ಲಿ ರೈತರು ಜಾನುವಾರುಗಳನ್ನು ಸಾಕಾಣಿಕೆಯನ್ನು ಮಾಡುತ್ತಿರುವುದು ಕಡಿಮೆಯಾಗಿದೆ.

ಈ ನಿಟ್ಟಿನಲ್ಲಿ ಹಿಂದೆ ರೈತರು ಜಾನುವಾರುಗಳನ್ನು ವ್ಯಾಪಾರ ವಿನಿಮಯ ಮಾಡಿಕೊಳ್ಳಲು ಸ್ಥಾಪಿಸಿದ ಗುಡುಗಳಲೆ ಜಾತ್ರೆಯು ಜಾತ್ರೆಯಲ್ಲಿ ಜಾನುವರುಗಳು ಇಲ್ಲದೆ ಕ್ಷೀಣಿಸುತ್ತಿದೆ ಎಂದರು. 

ಜಾನುವಾರುಗಳಿಲ್ಲದೆ ಕ್ಷೀಣಿಸುತ್ತಿರುವ ಜಾತ್ರೆಯನ್ನು ಮತ್ತೆ ಹಿಂದಿನ ವೈಭವವನ್ನು ಮರುಕಳಿಸಬೇಕಾದರೆ ಜಾತ್ರಾ ಸಮಿತಿಯವರು ಜಾತ್ರೆಯಲ್ಲಿ ರಥೋತ್ಸವಕ್ಕೆ ಮಹತ್ವ ನೀಡುವ ಮೂಲಕ ಬದಲಾವಣೆ ತರಬೇಕಾಗಿದೆ ಜಾತ್ರೆ ಮೈದಾನದಲ್ಲಿ ಮರಗಿಡಳನ್ನು ಬೆಳೆಸುವ ಮೂಲಕ ಪರಿಸರವನ್ನು ಅಭಿವೃದ್ದಿ ಪಡಿಸುವಂತೆ ಅವರು ಸಲಹೆ ನೀಡಿದರು.

ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ-ಪ್ರತಿಯೊಬ್ಬ ಮನುಷ್ಯನ ಮನಸು ಮರಿಶುದ್ದವಾಗಿದ್ದರೆ ಮಾತ್ರ ಸಮಾಜವು ಪರಿಶುದ್ದಗೊಳ್ಳುತ್ತದೆ ಸಮಾಜವನ್ನು ಅಭಿವೃದ್ದಿ ಪಡಿಸುವ ಜೊತೆಯಲ್ಲಿ ಪ್ರತಿಯೊಬ್ಬರೂ ಆರೋಗ್ಯದಾಯಕವಾಗಿ ಜೀವನ ಸಾಗಿಸುವ ಸಲುವಾಗಿ ಮರಗಿಡಗಳನ್ನು ಬೆಳೆಸಬೇಕು ಎಂದು ಹೇಳಿದ ಸ್ವಾಮೀಜಿ ಕ್ಷೀಣಿಸುತ್ತಿರುವ ಜಾತ್ರೋತ್ಸವವನ್ನು ಮತ್ತೆ ಹಿಂದಿನಂತೆ ಮರುಕಳಿಸಲು ಎಲ್ಲಾರೂ ಜಾತ್ರಾ ಸಮಿತಿಯರಿಗೆ ಬೆಂಬಲವಾಗಿ ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಮಾಜಿ ತಾ.ಪಂ.ಸದಸ್ಯ ಕುಶಾಲಪ್ಪ ಮಾತನಾಡಿ-ಮುಂದಿನ ದಿನದಲ್ಲಿ ಜಾತ್ರೆಯಲ್ಲಿ ರಥೋತ್ಸವಕ್ಕೆ ಮಹತ್ವ ನೀಡಿದರೆ ನಾವೆಲ್ಲರೂ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹಂಡ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಧಾ ಈರೇಶ್, ಹಂಡ್ಲಿ ಗ್ರಾಮದ ಪ್ರಮುಖ ಲಕ್ಷ್ಮಿಶೆಟ್ಟಿ, ಹಂಡ್ಲಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಚಿದಾನಂದ್ ಮುಂತಾದವರು ಮಾತನಾಡಿದರು.

ಜಾತ್ರಾ ಸಮಿತಿ ಅಧ್ಯಕ್ಷೆ ಎಂ.ಎಸ್.ಚೈತ್ರ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಜಾತ್ರಾ ಸಮಿತಿ ಕಾರ್ಯದರ್ಶಿ ಎಚ್.ಎಂ.ವಿನಿತ್ ಕುಮಾರ್, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರು, ನಿಡ್ತ ಗ್ರಾ.ಪಂ.ಅಧ್ಯಕ್ಷ ಅಶೋಕ್, ಹಂಡ್ಲಿ ಗ್ರಾ.ಪಂ.ಪಿಡಿಒ ಅಂಜನಾದೇವಿ, ಕೃಷಿ ಪತ್ತಿನ ಸಂಘದ ನಿರ್ದೇಶಕ ವೀರೇಂದ್ರ ಕುಮಾರ್ ಪ್ರಮುಖರಾದ ಬಸವಯ್ಯ, ಉಷಾ, ಮಹಾದೇವಮ್ಮ, ಈರಪ್ಪ ಜಾತ್ರಾ ಸಮಿತಿ ಸದಸ್ಯರು ಹಾಜರಿದ್ದರು.