ಹೈಕೋರ್ಟ್ ವಕೀಲರಿಗೆ ನಗ್ನ ವೀಡಿಯೊ ಕಳುಹಿಸಿ ಬ್ಲ್ಯಾಕ್‌ ಮೇಲ್; ಇಬ್ಬರ ಬಂಧನ, ಇನ್ನೊಬ್ಬ ಆರೋಪಿ ಪರಾರಿ | ಮೊದಲು 50 ಸಾವಿರಕ್ಕೆ ಬೇಡಿಕೆ, ಬಳಿಕ 6 ಲಕ್ಷಕ್ಕೆ ಬ್ಲ್ಯಾಕ್‌ ಮೇಲ್

Sep 27, 2025 - 21:03
 0  265
ಹೈಕೋರ್ಟ್ ವಕೀಲರಿಗೆ ನಗ್ನ ವೀಡಿಯೊ ಕಳುಹಿಸಿ ಬ್ಲ್ಯಾಕ್‌ ಮೇಲ್;  ಇಬ್ಬರ ಬಂಧನ, ಇನ್ನೊಬ್ಬ ಆರೋಪಿ ಪರಾರಿ    | ಮೊದಲು 50 ಸಾವಿರಕ್ಕೆ ಬೇಡಿಕೆ, ಬಳಿಕ 6 ಲಕ್ಷಕ್ಕೆ ಬ್ಲ್ಯಾಕ್‌ ಮೇಲ್
Photo credit: Free Press Journal

ಮುಂಬೈ, ಸೆ. 27: 63 ವರ್ಷದ ಹೈಕೋರ್ಟ್ ವಕೀಲರನ್ನು ಮಸಾಜ್ ವೇಳೆ ರಹಸ್ಯವಾಗಿ ನಗ್ನವಾಗಿ ಚಿತ್ರೀಕರಿಸಿ, ಆ ದೃಶ್ಯಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಬೊರಿವಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ.

 ಬಂಧಿತ ಆರೋಪಿಗಳನ್ನ ಸಮೀರ್ ಅಲಿ ಹನೀಫ್ ಖಾನ್ (21) ಮತ್ತು ಭೂಪೇಂದ್ರ ಭಗವಾನ್ ಸಿಂಗ್ (25) ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಆರೋಪಿಯನ್ನು ಮನ್ವಿಂದರ್ ಅಲಿಯಾಸ್ ಮುನ್ನಾ ಎಂದು ತಿಳಿದುಬಂದಿದೆ.

 ಸೆಪ್ಟೆಂಬರ್ 7 ರಿಂದ 22ರ ಅವಧಿಯಲ್ಲಿ ಬೊರಿವಲಿ ಪಶ್ಚಿಮದಲ್ಲಿ ವಾಸವಾಗಿರುವ ಹೈಕೋರ್ಟ್ ವಕೀಲರು ಜಸ್ಟ್‌ ಡಯಲ್ ಮೂಲಕ ಮಸಾಜ್ ಸೇವೆಗಾಗಿ ಸಮೀರ್ ನನ್ನು ಸಂಪರ್ಕಿಸಿದ್ದರು. ಅಪಾಯಿಂಟ್‌ಮೆಂಟ್‌ಗಳ ಬಳಿಕ ಆರಂಭದಲ್ಲಿ ಇಬ್ಬರು, ಮೂರನೇ ಬಾರಿ ಸಮೀರ್ ತನ್ನ ಸಹಚರರಾದ ಭೂಪೇಂದ್ರ ಮತ್ತು ಮನ್ವಿಂದರ್ ಜೊತೆ ವಕೀಲರ ಮನೆಗೆ ತೆರಳಿದ್ದಾನೆ.

ಮಸಾಜ್ ಮಾಡುವ ವೇಳೆ ಭೂಪೇಂದ್ರ ವಕೀಲರನ್ನು ನಗ್ನವಾಗಿ ಚಿತ್ರೀಕರಿಸಿ, ನಂತರ ಆ ವೀಡಿಯೊ ವೈರಲ್ ಮಾಡುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. 50,000 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ವಕೀಲರು ಪಾವತಿಸಲು ನಿರಾಕರಿಸಿದಾಗ ಆರೋಪಿಗಳು ಬೆಲ್ಟ್‌ ನಿಂದ ಹಲ್ಲೆ ನಡೆಸಿದೆ ಎಂದು ದೂರು ದಾಖಲಾಗಿದೆ. ಮರ್ಯಾದೆಗೆ ಅಂಜಿ ಮತ್ತು ದೈಹಿಕ ಹಲ್ಲೆಯ ಭಯದಿಂದ ವಕೀಲರು ಅಂತಿಮವಾಗಿ GPay ಮೂಲಕ ಹಣ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.

ಆ ಬಳಿಕ ಸಮೀರ್ ಮತ್ತು ಭೂಪೇಂದ್ರ ತಲಾ ರೂ. 20,000 ಹಾಗೂ ಮನ್ವಿಂದರ್ ರೂ. 10,000 ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಕಿರುಕುಳ ಅಲ್ಲಿಯೇ ನಿಲ್ಲದೆ, ಕಳೆದ ವಾರ ಭೂಪೇಂದ್ರ ಮತ್ತೊಮ್ಮೆ ವಕೀಲರನ್ನು ಸಂಪರ್ಕಿಸಿ, ಅದೇ ವೀಡಿಯೊ ಬಹಿರಂಗ ಮಾಡುವ ಬೆದರಿಕೆಯೊಡ್ಡಿ 6 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಹೀಗೆ ಪದೇಪದೇ ನಡೆಯುತ್ತಿದ್ದ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ವಕೀಲರು ಕೊನೆಗೆ ಸೆಪ್ಟೆಂಬರ್ 23 ರಂದು ಬೊರಿವಲಿ ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದ್ದಾರೆ.

ಹಿರಿಯ ಇನ್ಸ್‌ಪೆಕ್ಟರ್ ಮಧುಸೂದನ್ ನಾಯಕ್ ಅವರ ನೇತೃತ್ವದ ವಿಶೇಷ ತಂಡವು ಸೈಬರ್ ಸೆಲ್ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಖೇರ್ವಾಡಿಯಲ್ಲಿ ಸಮೀರ್ ಹಾಗೂ ಅಂಧೇರಿಯಲ್ಲಿ ಭೂಪೇಂದ್ರ ಅವರನ್ನು ಬಂಧಿಸಿದೆ. ವಿಚಾರಣೆ ವೇಳೆ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಮೂರನೇ ಆರೋಪಿ ಮನ್ವಿಂದರ್ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

 ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಮುಂಬೈನ ಶ್ರೀಮಂತ ಮನೆಗಳಲ್ಲಿ ಹಿರಿಯರಿಗೆ ಆರೈಕೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಮಸಾಜ್ ಸೇವೆಗಳ ಹೆಸರಿನಲ್ಲಿ ಹಲವರನ್ನು ಬಲೆಗೆ ಬೀಳಿಸಿದ್ದ ಸಾಧ್ಯತೆಯಿದೆ. ವಶಪಡಿಸಿಕೊಂಡ ಮೊಬೈಲ್‌ಗಳಲ್ಲಿ ಇತರ ಸಂತ್ರಸ್ತರ ವೀಡಿಯೊಗಳೂ ಪತ್ತೆಯಾಗಿವೆ.

 “ಈ ಗುಂಪು ಸಂಘಟಿತ ಬ್ಲ್ಯಾಕ್‌ಮೇಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಇವರಿಂದ ಕಿರುಕುಳಕ್ಕೊಳಗಾದವರು ಮುಂದೆ ಬಂದು ದೂರು ದಾಖಲಿಸಬೇಕೆಂದು ನಾವು ಮನವಿ ಮಾಡುತ್ತೇವೆ” ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0