ಡೆಂಟಲ್ ಡಾಕ್ಟರ್ ಜೊತೆ ಅಕ್ರಮ ಸಂಬಂಧ; ಪತ್ನಿಯ ಬಲಗಾಲಿನ ನರಕ್ಕೆ ಅನೆಸ್ತೇಶಿಯ ಕೊಟ್ಟು ಕೊಲೆ ಮಾಡಿದ ಡಾಕ್ಟರ್ ಪೋಸ್ಟ್ ಮಾರ್ಟಂ ಬೇಡ ಎಂದಿದ್ದ! | ಜೀವ ಉಳಿಸುವ ವೈದ್ಯ ಮಗಳ ಜೀವ ತೆಗೆಯಲಾರ ಎಂದು ನಂಬಿದ್ದ ಮಾವನಿಗೇ ದೋಖಾ
ಬೆಂಗಳೂರು, ಅ.16: ವೈದ್ಯೆ ಡಾ. ಕೃತಿಕಾ ರೆಡ್ಡಿ ಅವರ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಹೊಸ ತಿರುವು ದೊರೆತಿದೆ. ಸುಮಾರು ಆರು ತಿಂಗಳ ಹಿಂದೆ ನಡೆದ ಈ ಘಟನೆಯಲ್ಲಿ ಪತಿ ಡಾ. ಮಹೇಂದ್ರ ರೆಡ್ಡಿಯೇ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆಗೈದಿರುವುದು ಈಗ ಬಹಿರಂಗವಾಗಿದೆ. ಆರೋಪಿಯನ್ನು ಮಾರತಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರಂಭದಲ್ಲಿ ಕೃತಿಕಾಗೆ ಅನಾರೋಗ್ಯ ಇತ್ತು, ಅದನ್ನು ಮುಚ್ಚಿಟ್ಟು ವಿವಾಹ ನಡೆಸಲಾಗಿತ್ತು ಎಂಬ ಕಾರಣದಿಂದ ಮಹೇಂದ್ರ ಕೊಲೆಗೈದರು ಎಂಬ ವದಂತಿ ಹರಡಿದ್ದರೂ, ಅದು ತಪ್ಪೆಂಬುದು ಇದೀಗ ಸ್ಪಷ್ಟವಾಗಿದೆ. ಮೃತೆಯ ಸಹೋದರಿ ಡಾ. ನಿಖಿತಾ, ಈ ಕೊಲೆ ಪೂರ್ವನಿಯೋಜಿತವಾಗಿದ್ದು, ಕೃತಿಕಾಗೆ ಯಾವುದೇ ಆರೋಗ್ಯ ಸಮಸ್ಯೆಯೇ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಡಾ. ನಿಖಿತಾ ಅವರ ಪ್ರಕಾರ, “ಕೃತಿಕಾ ಸಾವನ್ನಪ್ಪಿದ ದಿನವೇ ನಮಗೆ ಅನುಮಾನ ಬಂತು. ನಾವು ತಕ್ಷಣ ಪೋಸ್ಟ್‌ಮಾರ್ಟಂ ಮಾಡಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಮಹೇಂದ್ರ ನಾಟಕವಾಡುತ್ತಾ ‘ಪೋಸ್ಟ್‌ಮಾರ್ಟಂ ಬೇಡ’ ಎಂದು ತಡೆಯಲು ಯತ್ನಿಸಿದರು. ಬಳಿಕ ತನಿಖೆಯಲ್ಲಿ ಆತನಿಗೆ ಅನೈತಿಕ ಸಂಬಂಧವಿತ್ತು ಎಂಬುದು ಬಹಿರಂಗವಾಯಿತು,” ಎಂದು ತಿಳಿಸಿದ್ದಾರೆ.
ಪ್ರೊಪೊಫೋಲ್ ಇಂಜೆಕ್ಷನ್‌ನಿಂದ ಕೊಲೆ ಮಾಡಿದ ಶಂಕೆ ಎಫ್‌ಎಸ್‌ಎಲ್ ವರದಿ ಪ್ರಕಾರ, ಕೃತಿಕಾಗೆ ಪ್ರೊಪೊಫೋಲ್ (Propofol) ಎಂಬ ಶಕ್ತಿಯುತ ಅನಸ್ತೇಶಿಯಾ ಇಂಜೆಕ್ಷನ್ ನೀಡಲಾಗಿದೆ. ಈ ಇಂಜೆಕ್ಷನ್ ಸಾಮಾನ್ಯವಾಗಿ ವೈದ್ಯಕೀಯ ವಲಯದವರಿಗೆ ಮಾತ್ರ ಲಭ್ಯವಾಗುವ ಔಷಧವಾಗಿದ್ದು, ಮಹೇಂದ್ರ ತನ್ನ ಕೆಲಸದ ಸ್ಥಳದಿಂದ ತರಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪೋಸ್ಟ್‌ಮಾರ್ಟಂ ವೇಳೆ ನಾಟಕವಾಡಿದ ಪತಿ “ಪೋಸ್ಟ್‌ಮಾರ್ಟಂ ಸಮಯದಲ್ಲಿ ಮಹೇಂದ್ರ ಕಣ್ಣೀರಿಟ್ಟು ‘ದೇಹವನ್ನು ಕತ್ತರಿಸುವುದನ್ನು ನೋಡಲಾಗದು’ ಎಂದು ನಾಟಕವಾಡಿದರು. ಆ ಮೂಲಕ ಪೋಷಕರ ಮನಸ್ಸಿನಲ್ಲಿ ತನ್ನ ಬಗ್ಗೆ ಒಳ್ಳೆಯ ಭಾವನೆ ಮೂಡಿಸಲು ಪ್ರಯತ್ನಿಸಿದರು,” ಎಂದು ನಿಖಿತಾ ಆರೋಪಿಸಿದ್ದಾರೆ.
ಆದರೆ ಪೊಲೀಸರಿಗೆ ಸ್ಥಳದಲ್ಲಿ ದೊರೆತ ಔಷಧಿಪರಿಕರಗಳು ಕಂಡು ಅನುಮಾನ ಮೂಡಿತ್ತು. ಎಲ್ಲವೂ ಸಮೀಕರಣಕ್ಕೆ ತಾಳೆಯಾಗದಿದ್ದಾಗ ಕೂಡಲೇ ಸಾಕ್ಷ್ಯಗಳನ್ನು ಸಂಗ್ರಹಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡುವಂತೆ ಕುಟುಂಬಸ್ಥರ ಮನವೊಲಿಸಿದರು. ಮೊದಲಿಗೆ ಬೇಡ ಅಂದಿದ್ದ ಕುಟುಂಬಸ್ಥರು ಕೊನೆಗೂ ಒಪ್ಪಿದರು. ಅಲ್ಲಿ ಸಿಕ್ಕ ಎಲ್ಲಾ ಸಾಕ್ಷ್ಯಗಳನ್ನು ಎಫ್ ಎಸ್ ಎಲ್ ವರದಿಗೆ ಕಳುಹಿಸಲಾಯಿತು.
ಕೃತಿಕಾ ಪತಿ ಮಹೇಂದ್ರ ರೆಡ್ಡಿ ಬಚಾವಾದೆ ಅಂದುಕೊಳ್ಳುವಾಗಲೇ ಅಕ್ಟೋಬರ್ 14ರಂದು ವರದಿ ಬಂತು. ಸಹಜ ಸಾವು ಎಂದು ಅಂದುಕೊಂಡಿದ್ದ ಕೃತಿಕಾ ಕುಟುಂಬಸ್ಥರಿಗೆ ಆಘಾತ ಕಾಡಿತ್ತು. ಅಳಿಯ ಒಳ್ಳೆಯವನು ಅಂದುಕೊಂಡಿದ್ದೆ ತಪ್ಪಾಗಿತ್ತು. ಆತ ತಾನೊಬ್ಬ ವೈದ್ಯಕೀಯ ಲೋಕದ ಮಹಾನ್ ಕ್ರಿಮಿನಲ್ ಎಂದು ತೋರಿಸಿಯೇ ಬಿಟ್ಟಿದ್ದ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಆತನನ್ನು ಬಂಧಿಸಲಾಯಿತು
. ‘ಕೃತಿಕಾಗೆ ಆರೋಗ್ಯ ಸಮಸ್ಯೆಯೇ ಇರಲಿಲ್ಲ’
“ಕೃತಿಕಾ ಪೂರ್ಣವಾಗಿ ಆರೋಗ್ಯವಂತಳಾಗಿದ್ದರು. ನಾನು ಆಕೆಯ ಅಕ್ಕ — ಆಕೆಯ ಆರೋಗ್ಯ, ಜೀವನಶೈಲಿ ಎಲ್ಲವೂ ನನಗೆ ಗೊತ್ತು. ಮಹೇಂದ್ರನನ್ನು ನಮ್ಮ ತಾಯಿ-ತಂದೆಯವರು ಮಗನಂತೆ ನೋಡಿಕೊಂಡಿದ್ದರು. ಆದರೆ ಆತ ನಮ್ಮ ನಂಬಿಕೆಗೆ ಧಕ್ಕೆ ತಂದಿದ್ದಾನೆ,” ಎಂದು ನಿಖಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಲಿನಿಕ್ ತೆರೆಯುವ ಕನಸಿತ್ತು ಮದುವೆಯ ಬಳಿಕ ಕೃತಿಕಾ ತಮ್ಮದೇ ಕ್ಲಿನಿಕ್ ತೆರೆಯುವ ಆಸೆ ಹೊಂದಿದ್ದರು. ಆದರೆ ಮಹೇಂದ್ರ ಅದಕ್ಕೆ ಯಾವತ್ತೂ ಬೆಂಬಲ ನೀಡಲಿಲ್ಲ. ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುವುದಕ್ಕೂ ಆತ ನಿರಾಕರಿಸಿದ್ದ. “ಕೃತಿಕಾ ‘ಮಹೇಂದ್ರ ನನಗೆ ಅನವಶ್ಯಕ ಔಷಧ ಕೊಡುತ್ತಿದ್ದಾರೆ’ ಎಂದು ನನಗೆ ಹೇಳಿಕೊಂಡಿದ್ದರು,” ಎಂದು ನಿಖಿತಾ ಹೇಳಿದ್ದಾರೆ. ಹಲವು ಬಾರಿ ಈ ಬಗ್ಗೆ ನಿಖಿತಾ ಪ್ರಶ್ನಿಸಿದಾಗ ನಾನೊಬ್ಬ ಗ್ಯಾಸ್ ಟ್ರೊ ಸರ್ಜನ್ ನನಗೆಲ್ಲಾ ಗೊತ್ತು ಎಂದು ಎಲ್ಲೂ ಅನುಮಾನ ಮೂಡದಂತೆ ವರ್ತಿಸಿದ್ದ!
ಕುಟುಂಬವು ಕೃತಿಕಾ ಅವರ ಸಮಾಜಸೇವಾ ಮನೋಭಾವವನ್ನು ನೆನೆದು ದುಃಖ ವ್ಯಕ್ತಪಡಿಸಿದೆ. “ಅವಳು ಬಡ ಜನರಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲು ಬಯಸುತ್ತಿದ್ದಳು,” ಎಂದು ಅವರು ತಿಳಿಸಿದ್ದಾರೆ. ಆಕೆಯ ನೆನಪಿಗಾಗಿ, ಕೃತಿಕಾ ವಾಸಿಸುತ್ತಿದ್ದ ಮನೆಯನ್ನು ಕುಟುಂಬವು ಇಸ್ಕಾನ್ ದೇವಾಲಯಕ್ಕೆ ದಾನ ಮಾಡಿದೆ.
ತನಿಖೆ ತೀವ್ರಗೊಳಿಸಿದ ಪೊಲೀಸರು ಮಾರತಹಳ್ಳಿ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರೊಪೊಫೋಲ್ ಇಂಜೆಕ್ಷನ್ ಹೇಗೆ ಕೃತಿಕಾಗೆ ನೀಡಲಾಯಿತು ಹಾಗೂ ಔಷಧದ ಮೂಲ ಏನು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.