ಇಂಡಿಗೋ ಹಾರಾಟದಲ್ಲಿ ವ್ಯತ್ಯಯ | KIALನಲ್ಲಿ 102 ವಿಮಾನ ರದ್ದು; ಪ್ರಯಾಣಿಕರಿಂದ ತೀವ್ರ ಅಸಮಾಧಾನ

Dec 5, 2025 - 16:22
 0  458
ಇಂಡಿಗೋ ಹಾರಾಟದಲ್ಲಿ ವ್ಯತ್ಯಯ | KIALನಲ್ಲಿ 102 ವಿಮಾನ ರದ್ದು; ಪ್ರಯಾಣಿಕರಿಂದ ತೀವ್ರ ಅಸಮಾಧಾನ
Photo credit: TV09

ದೇವನಹಳ್ಳಿ, ಡಿ. 05: ಇಂಡಿಗೋ ವಿಮಾನಯಾನ ಸಂಸ್ಥೆಯ ಹಾರಾಟದಲ್ಲಿ ಮುಂದುವರಿದಿರುವ ಕಾರ್ಯಾಚರಣಾ ವ್ಯತ್ಯಯದಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಗಂಭೀರ ಪರಿಣಾಮ ಉಂಟಾಯಿತು. ದಿನದಲ್ಲೇ ಒಟ್ಟು 102 ವಿಮಾನಗಳ ಸಂಚಾರ ರದ್ದುಗೊಂಡಿದ್ದು, 50 ನಿರ್ಗಮಿಸುವ ಹಾಗೂ 52 ಆಗಮಿಸುವ ವಿಮಾನಗಳು ಹಾರಾಟ ನಡೆಸಲಿಲ್ಲ. ಇದಲ್ಲದೆ 30ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಯಿತು.

ಹಾರಾಟದ ನಿರಂತರ ಸ್ಥಗಿತದಿಂದ ಪ್ರಯಾಣಿಕರು ಸೇವಾ ಕೌಂಟರ್‌ಗಳ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಟಿಕೆಟ್ ಮರುನಿಗದಿಕೆ, ಹಣ ಮರಳಿಸುವಿಕೆ ಹಾಗೂ ಮಾಹಿತಿ ಒದಗಿಸುವಲ್ಲಿ ವಿಳಂಬ ಉಂಟಾದ ಪರಿಣಾಮ ಅಸಮಾಧಾನ ಇನ್ನಷ್ಟು ಹೆಚ್ಚಾಯಿತು.

ಹಾರಾಟ ರದ್ದುಗೊಂಡ ಪರಿಣಾಮ ವಿಮಾನ ನಿಲ್ದಾಣದ ಆಗಮನ ದ್ವಾರಗಳು ದಿನವಿಡೀ ಖಾಲಿಯಾಗಿ ಕಂಡವು. ಪ್ರಯಾಣಿಕರ ಓಡಾಟ ಕುಂಠಿತಗೊಂಡ ಕಾರಣ ಟ್ಯಾಕ್ಸಿ ಚಾಲಕರು, ಬಿಎಂಟಿಸಿಯ ವಾಯುವಜ್ರ ಮತ್ತು ಕೆಎಸ್ಆರ್ಟಿಸಿಯ ಫ್ಲೈ ಬಸ್ ಗೆ ಪ್ರಯಾಣಿಕರು ಇರಲಿಲ್ಲ. ಕಳೆದ ಮೂರು ದಿನಗಳಿಂದ ಬಿಎಂಟಿಸಿಯ ಆದಾಯದಲ್ಲಿ ಗಣನೀಯವಾಗಿ ಕುಸಿತವಾಗಿರುವುದು ತಿಳಿದು ಬಂದಿದೆ.

ಪ್ರಯಾಣಿಕರ ಅಸಮಾಧಾನ ತೀವ್ರಗೊಂಡ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಪರಿಸ್ಥಿತಿ ಉಂಟಾಗದಂತೆ ಟರ್ಮಿನಲ್–1ರಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದ್ದು, ಪ್ರಯಾಣಿಕರ ಅಸಮಾಧಾನವನ್ನು ಶಮನಗೊಳಿಸುವ ಕಾರ್ಯವೂ ನಡೆದಿದೆ. 

ಇಂಡಿಗೋ ಸಂಸ್ಥೆಯೊಳಗಿನ ಕಾರ್ಯಕಾರಿ ಅಡಚಣೆಗಳು ಸಂಪೂರ್ಣ ಪರಿಹಾರವಾಗದಿರುವುದರಿಂದ ಹಾರಾಟ ವ್ಯತ್ಯಯ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ. ಸಂಸ್ಥೆಯು ಪ್ರಯಾಣಿಕರಿಗೆ ಸಂದೇಶ ಮತ್ತು ಇಮೇಲ್‌ಗಳ ಮೂಲಕ ಅಡಚಣೆಯ ಕುರಿತು ಮಾಹಿತಿ ನೀಡಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0