ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 30 ಕೋಟಿ ರೂ ಲಾಭ: ಬಾಂಡ್ ಗಣಪತಿ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 30 ಕೋಟಿ ರೂ ಲಾಭ: ಬಾಂಡ್ ಗಣಪತಿ

ಮಡಿಕೇರಿ ಏ.06:-ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು 30.46 ಕೋಟಿ ರೂ. ಲಾಭಾಂಶ ಹೊಂದಿದ್ದು, 23.14 ಕೋಟಿ ರೂ. ನಿವ್ವಳ ಲಾಭ ಹೊಂದಿದೆ ಎಂದು ಕೊಡಗು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ತಿಳಿಸಿದ್ದಾರೆ.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕಿನ 17 ವರ್ಷದ ಪ್ರಗತಿಯ ಅಂಕಿ ಅಂಶ ವಿವರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಾರ್ಚ್ ಅಂತ್ಯಕ್ಕೆ 255 ಸದಸ್ಯರನ್ನು ಹೊಂದಿದ್ದು, 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ ಸೌಲಭ್ಯ ಕಲ್ಪಿಸುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 37 ಕೋಟಿಯಷ್ಟು ಷೇರು ಬಂಡವಾಳ ಹೊಂದಿದ್ದು, 13,293 ಲಕ್ಷ ರೂ. ನಿಧಿ ಹೊಂದಿದೆ. ಹಾಗೆಯೇ 15,608 ಲಕ್ಷ ಸ್ವಂತ ಬಂಡವಾಳ ಹೊಂದಿದ್ದು, 2,04,311 ಠೇವಣಿ ಹೊಂದಿದೆ ಎಂದು ವಿವರಿಸಿದರು.

ನಬಾರ್ಡ್‍ನಿಂದ 37,492 ಲಕ್ಷ ರೂ. ಸಾಲವನ್ನು ಪಡೆಯಲಾಗಿದೆ. 73,370 ಲಕ್ಷ ಬಂಡವಾಳ ಹೂಡಿಕೆ ಇದೆ ಎಂದು ಬಾಂಡ್ ಗಣಪತಿ ಅವರು ವಿವರಿಸಿದರು. ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ 1,42,226 ಲಕ್ಷ ಕೃಷಿಕರಿಗೆ ಸಾಲ ನೀಡಿದೆ. ರೈತ ಸದಸ್ಯರು ಕೃಷಿ ಸಾಲ, ಕೃಷಿಯೇತರ ಸಾಲ ಹೀಗೆ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಶೇಕಡಾವಾರು ಸಾಲ ವಸೂಲಾತಿ ಗಮನಿಸಿದಾಗ 99 ರಷ್ಟು ಸಾಲ ವಸೂಲಾತಿ ಆಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

 ಸ್ವಸಹಾಯ ಗುಂಪುಗಳ ರಚನೆ, ಸ್ವಸಹಾಯ ಗುಂಪುಗಳ ಸಾಲ ಹೊರ ಬಾಕಿ, ಮತ್ತಿತರ ಕಾರ್ಯಗಳನ್ನು ಡಿಸಿಸಿ ಬ್ಯಾಂಕ್ ಮೂಲಕ ನಡೆಸಲಾಗಿದೆ. ಶಾಸನ ಬದ್ಧ ಆಡಿಟ್ ವರ್ಗೀಕರಣದಲ್ಲಿ ಡಿಸಿಸಿ ಬ್ಯಾಂಕ್ ‘ಎ’ ಗ್ರೇಡ್ ಹೊಂದಿದ್ದು, 96 ರಷ್ಟು ಅಂಕ ಪಡೆದಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು. ಕೊಡಗು ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಆಚರಿಸಿದ್ದು, ತನ್ನದೇ ಆದ ಇತಿಹಾಸವನ್ನು ಹೊಂದಿದೆ.

 ಕೊಡಗು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರು, ವೃತ್ತಿಪರ ನಿರ್ದೇಶಕರು ಸೇರಿದಂತೆ ಕಾಲ ಕಾಲಕ್ಕೆ ಸಮಿತಿ, ಉಪ ಸಮಿತಿಗಳ ಸಭೆಯನ್ನು ನಡೆಸಿ, ಸಲಹೆ, ಮಾರ್ಗದರ್ಶನ ಪಡೆದು ಕೃಷಿಕರಿಗಾಗಿ ಕೆಲಸ ಮಾಡುತ್ತಿದೆ ಎಂದರು. ಆರ್ಥಿಕ ವರ್ಷದಲ್ಲಿ ಆಂತರಿಕ ಲೆಕ್ಕಪರಿಶೋಧನೆ ಮಾಡಿಸಲಾಗಿದೆ. ಪ್ರತೀ ಮಾಸಿಕ ಸಭೆಯನ್ನು ಸಹ ನಡೆಸಲಾಗಿದೆ ಎಂದು ವಿವರಿಸಿದರು. ಶತಮಾನೋತ್ಸವ ಪ್ರಯುಕ್ತ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಡಿಸಿಸಿ ಬ್ಯಾಂಕ್ ಕಟ್ಟಡ ನಿರ್ಮಿಸಲಾಗಿದೆ. ಹಾಗೆಯೇ ಸರ್ಕಾರದ ನಿಯಮಾನುಸಾರ ನೇಮಕಾತಿಯನ್ನು ಸಹ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಕೃಷಿಕರಿಗಾಗಿ ಸಾಲ ನೀಡುವುದು, ಠೇವಣಿ ಇಟ್ಟವರಿಗೆ ಸಾಲ ಬಿಡುಗಡೆ ಮಾಡುವುದು. ರೈತರ ಹಿತಾಸಕ್ತಿ ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ನುಡಿದರು. ಸರ್ಕಾರದ ಮಾರ್ಗ ಸೂಚಿಯಂತೆ ಡಿಸಿಸಿ ಬ್ಯಾಂಕ್ ಕೆಲಸ ಮಾಡುತ್ತಿದ್ದು, ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು.

ನಿಯಮ ಹಾಗೂ ಕಾನೂನುಗಳನ್ನು ಮೀರಿ ಡಿಸಿಸಿ ಬ್ಯಾಂಕ್ ಕೆಲಸ ಮಾಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಸೇರಿದಂತೆ ಎಲ್ಲರ ಸಹಕಾರದಿಂದ ಯಾವುದೇ ಲೋಪವಿಲ್ಲದೆ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಒಬ್ಬ ಗ್ರಾಹಕರಿಗೆ ಕೃಷಿ ಸಂಬಂಧಿಸಿದ ಸಾಲದ ಜೊತೆಯಲ್ಲಿ ವಿವಿಧ ಚಟುವಟಿಕೆಗಳಿಗೆ ಒಟ್ಟು 60 ಲಕ್ಷ ರೂ.ವರೆಗೂ ಸಾಲ ವಿತರಿಸಲಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಹರೀಶ್ ಪೂವಯ್ಯ, ನಿರ್ದೇಶಕರಾದ ರಘು ನಾಣಯ್ಯ, ಸತೀಶ್ ಕುಮಾರ್, ಅರುಣ್ ಭೀಮಯ್ಯ, ನಾಪಂಡ ಎಂ.ಮುತ್ತಪ್ಪ, ಶರವಣ ಕುಮಾರ್, ಜಲಜಾ ಶೇಖರ್, ಮುಂಡಂಡ ಸಿ.ನಾಣಯ್ಯ, ಬಿ.ಎಂ.ಬೋಜಮ್ಮ,, ಕಿಲನ್ ಗಣಪತಿ, ಇತರರು ಕೊಡಗು ಡಿಸಿಸಿ ಬ್ಯಾಂಕು ರಾಜ್ಯದಲ್ಲಿಯೇ ಮಾದರಿಯಾಗಿದ್ದು, ಕೃಷಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

 ನಿರ್ದೇಶಕರಾದ ಎಚ್.ಕೆ.ಮಾದಪ್ಪ, ಕಾಂಗೀರ ಸತೀಶ್, ಎಚ್.ಎಂ.ರಮೇಶ್, ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಕೆ.ಬೆಳ್ಯಪ್ಪ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಬೋಜಮ್ಮ ಇತರರು ಇದ್ದರು.