ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು; ಗ್ರಾಹಕರ ಕುಂದುಕೊರತೆ ಸಭೆ
ಮಡಿಕೇರಿ:-ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಮಡಿಕೇರಿ ಇದರ ಗ್ರಾಹಕರ ಕುಂದುಕೊರತೆ ಸಭೆಯು ಬ್ಯಾಂಕಿನ ಮುಖ್ಯ ಕಚೇರಿ ಶಾಖೆ ಹಾಗೂ ಕಾಲೇಜು ರಸ್ತೆ ಶಾಖೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಕಚೇರಿ ಶಾಖೆಯಲ್ಲಿ 60 ಹಾಗೂ ಕಾಲೇಜು ರಸ್ತೆ ಶಾಖೆಯಲ್ಲಿ 63 ಗ್ರಾಹಕರು ಹಾಜರಿದ್ದರು. ಸಭೆಯಲ್ಲಿ ಗ್ರಾಹಕರು ಬ್ಯಾಂಕಿನಲ್ಲಿ ಗ್ರಾಹಕರಿಗೆ ಸಿಗುವ ವಿವಿಧ ರೀತಿಯ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಎರಡೂ ಶಾಖೆಗಳಲ್ಲಿ ಗ್ರಾಹಕರು ಬ್ಯಾಂಕಿನ ಅಭಿವೃದ್ದಿಯ ಬಗ್ಗೆ, ಬ್ಯಾಂಕಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಉತ್ತಮ ಕಾರ್ಯವೈಖರಿ ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿರುವುದಾಗಿ ಪ್ರಶಂಸೆ ವ್ಯಕ್ತಪಡಿಸಿದರು. ಗ್ರಾಹಕರುಗಳು ಸಭೆಯಲ್ಲಿ ಕೇಳಿಕೊಂಡ ಪ್ರಶ್ನೆಗಳಿಗೆ ಬ್ಯಾಂಕಿನ ಅಧ್ಯಕ್ಷರು ಸ್ಥಳದಲ್ಲೇ ಉತ್ತರ ನೀಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಬ್ಯಾಂಕಿನ ಪ್ರಗತಿಯ ಅಂಕಿ ಅಂಶಗಳನ್ನು ಸಭೆಗೆ ಮಾಹಿತಿ ನೀಡಿದರು. ಗ್ರಾಹಕರು ಬ್ಯಾಂಕಿನ ಪ್ರಗತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ ಗಣಪತಿ ಅವರು ಮಾತನಾಡಿ 105 ವರ್ಷಗಳ ಇತಿಹಾಸವಿರುವ ಕೊಡಗು ಡಿಸಿಸಿ ಬ್ಯಾಂಕು ಜಿಲ್ಲೆಯಲ್ಲಿರುವ ವಿವಿಧ 23 ಬ್ಯಾಂಕುಗಳ ಪೈಕಿ ಠೇವಣಾತಿ ಸಂಗ್ರಹಣೆ ಹಾಗೂ ಸಾಲ ವಿತರಣೆಯಲ್ಲಿ ಅಗ್ರ ಸ್ಥಾನದಲ್ಲಿರುವುದಾಗಿ ಹಾಗೂ ಸಾಲ ವಸೂಲಾತಿಯಲ್ಲಿ ಶೇ.98 ರಷ್ಟು ಸಾಧನೆ ಮಾಡಿರುವುದಾಗಿ ತಿಳಿಸಿದರು.
ಜಿಲ್ಲೆಯ ರೈತರು, ಠೇವಣಿದಾರರು ಹಾಗೂ ಸಹಕಾರ ಸಂಘಗಳ ಸಹಕಾರದಿಂದ ಬ್ಯಾಂಕು ಈ ಸಾಧನೆಗೈಯಲು ಸಾಧ್ಯವಾಗಿದೆ ಎಂದರು. ಬ್ಯಾಂಕಿನ ಎನ್‍ಪಿಎ ಗಣನೀಯವಾಗಿ ಇಳಿಕೆಯಾಗಿದ್ದು ನಿವ್ವಳ ಎನ್‍ಪಿಎ ಶೂನ್ಯವಾಗಿದೆ ಎಂದು ಸಭೆಗೆ ತಿಳಿಸಿದರು. ಗ್ರಾಹಕರ ಕುಂದುಕೊರತೆ ಸಭೆ ವರ್ಷಕ್ಕೆ ಎರಡು ಬಾರಿ ನಡೆಸುತ್ತಿದ್ದು, ಬ್ಯಾಂಕಿನ ಎಲ್ಲಾ 26 ಶಾಖೆಗಳಲ್ಲಿಯೂ ಸ್ಥಳೀಯ ನಿರ್ದೇಶಕರ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಬ್ಯಾಂಕಿನ ನಿರ್ದೆಶಕರಾದ ಹೊಸೂರು ಸತೀಶ್‍ಕುಮಾರ್, ಕಾಂಗೀರ ಸತೀಶ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಮಣವಟ್ಟಿರ ಬೆಳ್ಯಪ್ಪ, ಶಾಖಾ ಸಿಬ್ಬಂದಿಗಳು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
