ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಧಿವಾತ ಶಾಸ್ತ್ರ ವಿಷಯದ ಬಗ್ಗೆ ಕಾರ್ಯಗಾರ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಧಿವಾತ ಶಾಸ್ತ್ರ ವಿಷಯದ ಬಗ್ಗೆ ಕಾರ್ಯಗಾರ

ಮಡಿಕೇರಿ ಜ.29:-ಕೊಡಗು ಜಿಲ್ಲೆಯ ವೈದ್ಯಕೀಯ ಶಿಕ್ಷಣ ಅಭಿವೃದ್ಧಿಪಡಿಸುವಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ಸಂಧಿವಾತ ಶಾಸ್ತ್ರದ ಬಗ್ಗೆ ಉನ್ನತ ಮಟ್ಟದ ಸಿ.ಎಂ.ಇ ಕಾರ್ಯಗಾರ ನಡೆಯಿತು. 

ಕರ್ನಾಟಕ ರುಮಟಾಲಜಿ ಅಸೋಸಿಯೇಷನ್ ಮತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿಯ ಸಂಯುಕ್ತಾಶ್ರಯದಲ್ಲಿ ಸಂಸ್ಥೆ ನಿರ್ದೇಶಕರು ಹಾಗೂ ಡೀನ್ ಲೋಕೇಶ್ ಎ.ಜೆ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. 

2018ರ ನಂತರ ಈ ವಿಷಯದ ಬಗ್ಗೆ ಜಿಲ್ಲೆಯಲ್ಲಿ ನಡೆದ ಮೊದಲ ದೊಡ್ಡ ಕಾರ್ಯಕ್ರಮ ಇದಾಗಿದ್ದು, ಸ್ಥಳೀಯ ವೈದ್ಯಕೀಯ ಸಮುದಾಯದಲ್ಲಿ ಈ ವಿಷಯದ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಯಿತು. 

ಈ ವಿಚಾರ ಸಂಕಿರಣದಲ್ಲಿ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸೇರಿದಂತೆ ಇತರೆ ರಾಜ್ಯದ ವೈದ್ಯರುಗಳು, ವಿವಿಧ ಕಾಲೇಜುಗಳ ಪ್ರತಿನಿಧಿಗಳು ಇದರಲ್ಲಿ ನೋಂದಾಯಿಸಿಕೊಂಡಿದ್ದರು.

ಡಾ.ಶಿವಪ್ರಸಾದ್ ಬಿ.ಎನ್. ಅವರು ಸಂವಾದಾತ್ಮಕ ಸೆಷನ್ ಮೂಲಕ ಚರ್ಚೆ ಆರಂಭಿಸಿದರು. ಡಾ.ಮಂಜುನಾಥ್, ಡಾ.ಪುರುಷೋತ್ತಮ್, ಡಾ.ಸಿಡ್ನಿ ಡಿಸೋಜಾ, ಡಾ.ಸುಧೇಂದ್ರ ರಾವ್ ಮತ್ತು ಡಾ.ಮುಖ್ಯಪ್ರಾಣ ಪ್ರಭು ಅವರ ನೇತೃತ್ವದಲ್ಲಿ ಶೈಕ್ಷಣಿಕ ಕಾರ್ಯಕಲಾಪಗಳು ಸುಗಮವಾಗಿ ನಡೆದವು.

ವೈಜ್ಞಾನಿಕ ಅಧಿವೇಶನದ ಮುಖ್ಯಾಂಶಗಳು: ಸಂಧಿವಾತದ ವಿಧಗಳು: ಡಾ.ಚೆಂಗಪ್ಪ ಕೆ.ಜಿ. ಅವರು ಕೀಲು ನೋವಿನ ವಿವಿಧ ವಿಧಗಳನ್ನು ಗುರುತಿಸುವ ಮತ್ತು ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಿದರು.

ಮಕ್ಕಳ ಸಂಧಿವಾತ: ಡಾ.ಪ್ರಕೃತಿ ಜೆ. ಅವರು ಮಕ್ಕಳಲ್ಲಿ ಕಂಡುಬರುವ ಕೀಲು ನೋವು ಮತ್ತು ಅದಕ್ಕೆ ನೀಡಬೇಕಾದ ಹಂತ ಹಂತದ ಚಿಕಿತ್ಸೆಗಳ ಬಗ್ಗೆ ವಿವರಿಸಿದರು.

 ಲ್ಯಾಬ್ ಪರೀಕ್ಷೆಗಳು: ಡಾ.ಸಂಗೀತ ಕೆ.ಎನ್. ಅವರು ಮಾತನಾಡಿ, "ಅಗತ್ಯಕ್ಕಿಂತ ಹೆಚ್ಚು ಪರೀಕ್ಷೆಗಳ ಅವಶ್ಯಕತೆಯಿಲ್ಲ" ಎಂದು ತಿಳಿಸಿದರು ಮತ್ತು ಕಣ್ಣಿನ ತಪಾಸಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

 ಸೋಂಕು ತಡೆಗಟ್ಟುವಿಕೆ: ಡಾ.ವಿಕ್ರಮರಾಜ್ ಕೆ. ಜೈನ್ ಅವರು ಸೋಂಕು ತಡೆಯುವ ನಾಲ್ಕು ಮುಖ್ಯ ಕ್ರಮಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳ ಬಗ್ಗೆ ಮಾಹಿತಿ ನೀಡಿದರು.

ವಿಶೇಷ ವಿಷಯಗಳ ಚರ್ಚೆ ಆಲ್ಪಾ ಮತ್ತು ಎಸ್‍ಎಲ್‍ವಿ: ಡಾ.ನಾಗರಾಜ್ ಎಸ್. ಅವರು ಆಲ್ಪಾ ಬಗ್ಗೆ ಮತ್ತು ಡಾ. ರಂಗರತ್ನ ಅವರು ಲೂಪಸ್ ಕಾಯಿಲೆಯ ಬಗ್ಗೆ ಮಾಹಿತಿ ನೀಡಿದರು.

ರೋಗದ ಲಕ್ಷಣಗಳು ಬೇರೆ ಬೇರೆ ಅಂಗಗಳ ಮೇಲೆ ಪರಿಣಾಮ ಬೀರುವುದರಿಂದ ಎಲ್ಲ ವಿಭಾಗದ ವೈದ್ಯರು ಸೇರಿ ಚಿಕಿತ್ಸೆ ನೀಡಬೇಕು ಎಂದು ಅವರು ತಿಳಿಸಿದರು.

 ವಾಸ್ಕುಲೈಟಿಸ್: ರಕ್ತನಾಳಗಳ ಉರಿಯೂತದ ಬಗ್ಗೆ ಮಾತನಾಡಿದ ಡಾ.ರಮೇಶ್ ಜೋಯಿಸ್ ಅವರು, ಇದನ್ನು ಪತ್ತೆ ಹಚ್ಚಲು ಬಯಾಪ್ಸಿ ಮುಖ್ಯ ಎಂದು ಹೇಳಿದರು.

 ಗರ್ಭಾವಸ್ಥೆಯಲ್ಲಿ ಸಂಧಿವಾತ: ಡಾ.ವಿನೋದ್ ರವೀಂದ್ರನ್ ಅವರು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಇಂತಹ ಸಮಸ್ಯೆಗಳು ಮತ್ತು ಸುರಕ್ಷಿತ ಔಷಧಿಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಮತ್ತು ಕೇಸ್ ಪ್ರೆಸೆಂಟೇಶನ್ ಸ್ಪರ್ಧೆ ನಡೆಯಿತು. ವಿಜೇತರಿಗೆ ಮತ್ತು ಪ್ರಬಂಧ ಮಂಡಿಸಿದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.