ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ ಜಿಲ್ಲೆ ಚಿಕ್ಕದು, ಕೊಡುಗೆ ದೊಡ್ಡದು: ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ ಜಿಲ್ಲೆ ಚಿಕ್ಕದು, ಕೊಡುಗೆ ದೊಡ್ಡದು:   ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ-ಸಂಸ್ಕೃತಿ, ಭಾಷೆಯ ರಕ್ಷಣೆ ಮುಖ್ಯವಾದ ಜವಾಬ್ದಾರಿಯಾಗಿದ್ದು, ಸತ್ಕಾರಣಕ್ಕಾಗಿ ಸರ್ಕಾರ ಅಕಾಡೆಮಿ ಗಳನ್ನು ರಚಿಸಿದೆ. ಇದಕ್ಕೆ ಪೂರಕವಾಗಿ ಕೊಡವ ಸಾಹಿತ್ಯ ಅಕಾಡೆಮಿಯು ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯರವರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಯಶಸ್ಸಾಗಿ ನಡೆಸುತ್ತಿದ್ದು, ಸರ್ವ ಸದಸ್ಯರ ಸಹಕಾರ ಎದ್ದು ಕಾಣುತ್ತಿದೆ. ಎಲ್ಲಾರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಖಂಡಿತಾ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಸಮಾಜ ಕುಟ್ಟ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ, “2026ನೆ ಕಾಲತ್‌ರ ಗೌರವ ಪ್ರಶಸ್ತಿ ಮತ್ತು ಕೊಡವ ಸಾಹಿತ್ಯ-ಸಂಸ್ಕೃತಿರ ಅಂದೋಳ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರವು ಸಾಹಿತ್ಯ, ಸಂಸ್ಕೃತಿ, ಭಾಷೆಯ ರಕ್ಷಣೆ ಹಾಗೂ ಬೆಳವಣಿಗೆಯ ಉದ್ದೇಶದಿಂದ ಅಕಾಡೆಮಿಯನ್ನು ಸ್ಥಾಪಿಸಿದ್ದು, ಅದರಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ. ಕೊಡವ ಸಂಸ್ಕೃತಿ, ಸಂಪ್ರದಾಯ ಭಾಷೆ ಹಾಗೂ ಸಾಹಿತ್ಯದ ಏಳಿಗೆಗೆ ವಿವಿಧ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಹೆಚ್ಚು ಅನುಕೂಲಕಾರಿ ಎಂದು ಬಣ್ಣಿಸಿದರು.

 ಅನಾದಿ ಕಾಲದಿಂದಲೂ ಕುಟ್ಟ ಭಾಗದಲ್ಲಿ ಬಹುತೇಕ ಕೊಡವ ಜನಾಂಗದವರು ವಾಸಿಸುತ್ತಿದ್ದಾರೆ. ಇಂತಹ ಜಾಗದಲ್ಲಿ ಕಾರ್ಯಕ್ರಮ ಮಾಡುವುದರಿಂದ ಎಲ್ಲರ ಸಮ್ಮಿಲನದೊಂದಿಗೆ ನಮ್ಮ ಸಂಸ್ಕೃತಿ ಬೆಳೆಯಲು ತುಂಬಾ ಸಹಕಾರಿಯಾಗಲಿದೆ ಎಂದು ಆಶಿಸಿದರು. ಯುವಜನತೆಗೆ ನಮ್ಮ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪಾಲಿಸಲು ಪ್ರೋತ್ಸಾಹ ನೀಡಲು ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿ. ಆಧುನಿಕ ಯುಗದೊಂದಿಗೆ ನಾವು ಹೊಂದಿಕೊಂಡರು ಸಹ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಮುಂದಿನ ಪೀಳಿಗೆಗೆ ಅತಿ ಅವಶ್ಯಕವಾಗಿದೆ. ಕೊಡವ ಸಾಹಿತ್ಯ ಅಕಾಡೆಮಿಯೊಂದಿಗೆ ಈ ಗುರುತರ ಜವಾಬ್ದಾರಿ ನಾಡಿನ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ನೆನಪಿಸಿದರು. ಕೊಡಗು ಜಿಲ್ಲೆ ಪುಟ್ಟದಿದ್ದರೂ ದೇಶಕ್ಕೆ ಕೊಡವ ಜನಾಂಗದ ಕೊಡುಗೆ ದೊಡ್ಡದಿದೆ. ಇದು ಪಾರಂಪರ್ಯವಾಗಿ ಮುನ್ನಡೆಯುವಂತಾಗಲಿ ಎಂದು ಆಶಿಸಿದರು.

ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ ಕೊಡವರು ಸೇರಿದಂತೆ ಭಾಷಿಕ ಜನಾಂಗಗಳ ಸುವ್ಯವಸ್ಥೆಗೆ ಕೊಡವ ಸಾಹಿತ್ಯ ಹಾಗೂ ಸಂಸ್ಕೃತಿ ಆಧಾರಸ್ಥಂಬವಾಗಿದೆ. ಕೊಡವ ಭಾಷೆಯ ವೈಶಿಷ್ಟ್ಯ ಅರಿತು ಜರ್ಮನಿ, ಬ್ರಿಟಿಷ್ ವಿದ್ವಾಂಸರು 18ನೇ ಶತಮಾನದಲ್ಲಿ ಸಂಶೋಧನೆ, ಅಧ್ಯಯನ ನಡೆಸಿ ಕೊಡವ ಭಾಷೆಯ ವ್ಯಾಕರಣ ಪುಸ್ತಕ ರಚಿಸಿದ್ದೇ ಅಲ್ಲದೆ ಕೊಡವ-ಇಂಗ್ಲಿಷ್ ಅರ್ಥಕೋಶ ರಚಿಸಿದ್ದರು.

ಅಂತೆಯೇ 19ನೇ ಶತಮಾನದಲ್ಲಿ ಡಾ. ಕೊರವಂಡ ಅಪ್ಪಯ್ಯ ಕೊಡವ ಲಿಪಿಯನ್ನು ರಚಿಸಿದರು. ಅಪ್ಪನೆರವಂಡ ಅಪ್ಪಚ್ಚಕವಿ, ನಡಿಕೇರಿಯಂಡ ಚಿಣ್ಣಪ್ಪ, ಬಾಚಮಡ ಡಿ. ಗಣಪತಿ, ಐಚೆಟ್ಟಿರ ಮಾ ಮುತ್ತಣ್ಣ... ಸೇರಿದಂತೆ ಹಲವು ಸಮಕಾಲೀನರು ಅಂದಿನ ಕಾಲಘಟ್ಟದಲ್ಲಿ ಹಲವು ಕೊಡವ ಕವನ ಸಾಹಿತ್ಯ, ಕಥಾಸಾಹಿತ್ಯ, ಜನಪದ ಸಾಹಿತ್ಯವನ್ನು ರಚಿಸಿ ಕೊಡವ ಸಾಹಿತ್ಯ ಕ್ಷೇತ್ರವನ್ನು ಬೆಳೆಸುವಲ್ಲಿ ಕಾರಣೀಭೂತರಾದರು. ಅವರ ಸಾಹಿತ್ಯದಿಂದಾಗಿ ಇಂದು ಕೊಡವ ಸಾಹಿತ್ಯ-ಸಂಸ್ಕೃತಿ ತನ್ನದೇ ಆನ ನೆಲೆಯನ್ನು ಕಂಡುಕೊಂಡಂತಾಗಿದ್ದು ಇವರೆಲ್ಲರ ಪ್ರೇರಣೆಯಿಂದಾಗಿ ಆಧುನಿಕ ಬರಹಗಾರರು ಸಾಹಿತ್ಯ-ಸಂಸ್ಕೃತಿಯ ಏಳಿಗೆಯಲ್ಲಿ ತೊಡಗಿರುವುದು ಶ್ಲಾಘನೀಯ.

ಇಂತಹ ಸಾಹಿತ್ಯಗಳು ಅಂದಿನ ಕಾಲದಲ್ಲಿ ಇಲ್ಲದಿದ್ದಿದ್ದರೆ ಕೊಡವರ ಸಾಮಾಜಿಕ ಸ್ಥಿತಿಗತಿ ಅಸ್ತವ್ಯಸ್ತವಾಗುತ್ತಿತ್ತು ಎಂದು ಅಭಿಪ್ರಾಯಿಸಿದರು. ಅಂತಯೇ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ಶಿವರಾಜ್ ಎಸ್. ತಂಗಡಗಿ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರವರ ಸಹಕಾರದಿಂದ ಅಕಾಡೆಮಿಯಿಂದ ಉತ್ತಮ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಿದೆ ಎಂದರು. ಕೊಡವ ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ, ಜನಪದಗಳ ಏಳಿಗೆಯ ನಿಟ್ಟಿನಲ್ಲಿ ದುಡಿಯುತ್ತಿರುವ ಪ್ರತಿಯೋರ್ವರು ಕೊಡವ ಸಾಮಾಜಿಕ ನೆಲೆಯಲ್ಲಿ ಗೌರವಾನ್ವಿತರು. ಇವರುಗಳ ಸೇವೆ ಇನ್ನುಳಿದವರಿಗೆ ಪ್ರೇರಣಾಶಕ್ತಿಯಾಗಲಿ ಎಂದು ಆಶಿಸಿದರು.

 ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡಗಿನ ನೆಲ, ಜಲ, ಗಾಳಿ... ಪ್ರತಿಯೊಂದೂ ವಿಶ್ವದ ಇನ್ನುಳಿದ ಎಲ್ಲಿಯೂ ಕಂಡುಬಾರದಂತಹ ಪರಿಸರ. ಇದರೊಂದಿಗೆ ಕೊಡವರ ಸಾಹಿತ್ಯ, ಸಂಸ್ಕೃತಿಯು ವಿಶ್ವದಲ್ಲಿಯೇ ಮಾನ್ಯತೆಗೊಂಡಿದೆ. ಇಂತಹ ಸಾಹಿತ್ಯ ಸಂಸ್ಕೃತಿಯನ್ನು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯನವರಲ್ಲಿರುವ ಕೊಡವ ಭಾಷೆ ಹಾಗೂ ಸಾಹಿತ್ಯದ ಪರಿಜ್ಞಾನದಿಂದ ಉತ್ತಮವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತಿದ್ದಾರೆ. ಕೊಡವರು ಜನಸಂಖ್ಯೆಯಲ್ಲಿ ಕಡಿಮೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಅನುಕೂಲಕರವಲ್ಲ. ನಮ್ಮ 23 ಜನಾಂಗಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿರುವುದು ಅಕಾಡೆಮಿಯ ಕೆಲಸ ಕಾರ್ಯಗಳಿಂದ ಗೋಚರಿಸುತ್ತಿದೆ.

ಸರ್ವರೂ ಆಸೆ-ಪ್ರೀತಿಯಿಂದ ಮುನ್ನಡೆಯುವುದರ ಮೂಲಕ ಕೊಡವ ಸಾಹಿತ್ಯ-ಸಂಸ್ಕೃತಿಯನ್ನು ಬೆಳೆಸುವಂತಾಗಲಿ ಎಂದರು. ಕುಟ್ಟ ಕೊಡವ ಸಮಾಜದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣನವರ ಕಾರ್ಯವೈಖರಿ ಶ್ಲಾಘನೀಯ. ತಮ್ಮ ಕ್ಷೇತ್ರ ಮಾತ್ರವಲ್ಲದೆ ನಾಡಿದ ಸರ್ವರ ಏಳಿಗೆಯನ್ನು ಬಯಸಿರುವ ಇವರನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕಿದೆ. ಕೊಡವ ಅಕಾಡೆಮಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ಅತ್ಯುತ್ತಮವಾಗಿದೆ ಎಂದರು.

ತಮ್ಮ ಅವಧಿಯಲ್ಲಿ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದರು. ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಕೆ. ಸುಬ್ರಮಣಿ, ಕುಟ್ಟ ಕೊಡವ ಸಮಾಜ ಜಾಗ ದಾನಿಗಳಾದ ಮುಕ್ಕಾಟಿರ ರಾಜ ಮಂದಣ್ಣ ಇದ್ದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಪೊನ್ನಂಪೇಟೆ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಡ ಪ್ರಶಾಂತ್, ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಅರೆಕಾಡು ಕೊಡವ ಅಸೋಸಿಯೇಶನ್ ಅಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ, ಕೊಡವ ಕೆಂಬಟ್ಟಿ ಸಮಾಜ ಅಧ್ಯಕ್ಷ ಬಿಲ್ಲಿರಿಕುಟ್ಟಡ ಪ್ರಭು ಅಯ್ಯಪ್ಪ, ಶ್ರೀ ಕನ್ನಿ ಕಾವೇರಿ ಟ್ರಸ್ಟ್ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕಾಪಾಳ ಸಮಾಜ ಅಧ್ಯಕ್ಷ ಕಾಪಾಳಡ ಟಿ ಪೂಣಚ್ಚ, ಬಣ್ಣ ಸಮಾಜದ ಅಧ್ಯಕ್ಷ ಬೀಕಚಂಡ ಪುಟ್ಟ ಬೆಳ್ಯಪ್ಪ, ಹುದಿಕೇರಿ ಕೊಡವ ಸಮಾಜ ಅಧ್ಯಕ್ಷ ಮೀದೇರಿರ ಎ. ಸವಿನ್, ಟಿ.ಶೆಟ್ಟಿಗೇರಿ ಸಮಾಜ ಅಧ್ಯಕ್ಷ ಕೈಬುಲಿರ ಹರೀಶ್ ಹಾಗೂ ಅಕಾಡೆಮಿಯ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನ ಬೋಜಣ್ಣ,, ಕೊಂಡಿಜಮ್ಮನ ಬಾಲಕೃಷ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಸಿ. ಗಣೇಶ್, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಪೊನ್ನಿರ ಯು. ಗಗನ್, ಕುಡಿಯರ ಕೆ. ಕಾವೇರಪ್ಪ, ನಾಯಂದಿರ ಆರ್. ಶಿವಾಜಿ, ಚೆಪ್ಪುಡಿರ ಎಸ್. ಉತ್ತಪ್ಪ, 21 ಭಾಷಿಕ ಕೊಡವ ಸಮುದಾಯದ ಪ್ರಮುಖರು, ಪ್ರಮುಖರಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಮುಕ್ಕಾಟಿರ ಅರ್ಚನ, ಪಲ್ವಿನ್ ಪೂಣಚ್ಚ, ತಿತೀರ ಪ್ರಭು, ಚೆಯ್ಯಂಡ ಸತ್ಯ ಗಣಪತಿ, ಕಾಡ್ಯಮಡ ಕುಸುಮ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕುಟ್ಟ ಬಸ್ಸು ನಿಲ್ದಾಣದಿಂದ ಸಾಂಸ್ಕೃತಿಕ ಮೆರವಣಿಗೆಯು ಎತ್ತು ತೆರೆ, ಕಾಪಾಳ ಕಳಿ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್‌ಚ, ಕೊಂಬು-ಕೊಟ್ಟ್ ವಾಲಗದೊಂದಿಗೆ ಭವ್ಯವಾಗಿ ಕುಟ್ಟ ಕೊಡವ ಸಮಾಜದವರೆಗೆ ಸಾಗಿ ಬಂತು. ಕುಟ್ಟ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮುಕ್ಕಾಟಿರ ರಾಜ ಮಂದಣ್ಣ ಉದ್ಘಾಟಿಸಿದರು. ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ 3ನೇ ಕೊಡವ ಪುಸ್ತಕ ಪತ್ತಾಯವನ್ನು ಕುಟ್ಟ ಕೊಡವ ಸಮಾಜದಲ್ಲಿ ಸ್ಥಾಪಿಸಲಾಯಿತು.

ಈ ವೇಳೆ ಪತ್ತಾಯ ನೋಂದಣಿ ಮೊತ್ತ ಹತ್ತು ಸಾವಿರ ರೂಪಾಯಿಯ ಚೆಕ್ಕನ್ನು ಕುಟ್ಟ ಕೊಡವ ಸಮಾಜದ ವತಿಯಿಂದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಕೊಡವ ಅಕಾಡೆಮಿಯ ಮೂರುತಿಂಗಳ ಪತ್ರಿಕೆ ಕೊಡವೋಲೆ ಹಾಗೂ ಕಂಬೆಯಂಡ ಅಕ್ಷರ ಬೋಜಣ್ಣ ಬರೆದಿರುವ “ಕೌಂಟರಿಂಗ್ ಕೊಲನಿಯಲ್ ನರೇಟಿವ್ಸ್ ಥ್ರೂ ಪಟ್ಟೋಲೆ ಪಳಮೆ” ಪುಸ್ತಕವನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು. ತೀತಮಡ ಅರ್ಜುನ್ ದೇವಯ್ಯ ಹಾಗೂ ತೀತಿರ ರೇಖ ವಸಂತ್‌ರಿಂದ ವಿಚಾರ ಮಂಡನೆ ನಡೆದವು. ಕವಿಗಳಾದ ವೈಲೇಶ್ ಪಿಎಸ್, ಪುತ್ತಾಮನೆ ವಿದ್ಯಾ ಜಗದೀಶ್, ಉಳುವಂಗಡ ಕಾವೇರಿ ಉದಯ ಹಾಗೂ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಕವನ ವಾಚಿಸಿದರು.

ಕಾರ್ಯಕ್ರಮದ ಮುಖ್ಯಭಾಗವಾದ ಗೌರವ ಪ್ರಶಸ್ತಿ ಪ್ರದಾನದಲ್ಲಿ ಮಲ್ಲೇಂಗಡ ದಾದ ಬೆಳ್ಯಪ್ಪ, ಚೆಪ್ಪುಡಿರ ತಿಲಕ್ ಸುಬ್ಬಯ್ಯ, ಉದಿಯಂಡ ರೋಶನ್ ಸೋಮಣ್ಣ, ತೀತಮಡ ಅರ್ಜುನ್ ದೇವಯ್ಯ, ಚೆನಿಯಪಂಡ ಮನು ಮಂದಣ್ಣ, ಚೊಟ್ಟಿಯಂಡ ಅಪ್ಪಾಜಿ, ಕಣಿಯರ ನಾಣಯ್ಯ, ಚಮ್ಮಣಮಡ ವಾಣಿ ರಾಘವೇಂದ್ರ, ಕುಡಿಯಡ ಕೆ. ಚಿಣ್ಣಪ್ಪ, ಸುಳ್ಳಿಮಡ ಗೌರಿ ನಂಜಪ್ಪ, ಚೋಕಂಡ ಸಂಜು ಸುಬ್ಬಯ್ಯ, ಕೊರಕುಟ್ಟಿರ ಸರ ಚಂಗಪ್ಪ, ಐಮಂಡ ರೂಪೇಶ್ ನಾಣಯ್ಯ, ಕಾಳೆಕುಟ್ಟಡ ಮುತ್ತಣ್ಣ ಇವರುಗಳನ್ನು ಪ್ರಶಸ್ತಿ ಫಲಕ, ಗೌರವ ಧನ ನೀಡಿ ಸನ್ಮಾನಿಸಲಾಯಿತು. ಅಕಾಡೆಮಿ ವತಿಯಿಂದ 18 ಸಂಘ-ಸಂಸ್ಥೆ, ಸಮಾಜ, ಐನ್‌ಮನೆಗಳಿಗೆ ಒಟ್ಟು 50 ದುಡಿ ನೀಡಲಾಯಿತು.