ಕೂಡುಮಂಗಳೂರು ಗ್ರಾಮ‌ ಸಭೆ: ಬೆತ್ತಲೆ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥ!

ಕೂಡುಮಂಗಳೂರು ಗ್ರಾಮ‌  ಸಭೆ: ಬೆತ್ತಲೆ ಪ್ರತಿಭಟನೆಗೆ  ಮುಂದಾದ ಗ್ರಾಮಸ್ಥ!

ಕುಶಾಲನಗರ,ನ೨೮: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ೨೦೨೫-೨೬ ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರೊಬ್ಬರು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆದಿದೆ.

 ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಮಾರುಕಟ್ಟೆ ಕೇಂದ್ರದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಘಟನೆ ನಡೆದಿದೆ. ವಿಜಯನಗರ ನಿವಾಸಿ‌ ಗೋವಿಂದರಾಜ್ ದಾಸ್ ಅವರು, ತಾವು ಕಂದಾಯ ಪಾವತಿಸಿರುವ ಜಾಗವು ಅತಿಕ್ರಮವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಗ್ರಾಮ ಸಭೆಯಲ್ಲಿ ಅರ್ಜಿ ನೀಡಲಾಗಿತ್ತು.

ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗ್ರಾಮಸಭೆಯ ನಡಾವಳಿಯಲ್ಲಿ ದಾಖಲು ಕೂಡಾ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಪಂಚಾಯಿತಿ ಸದಸ್ಯರು ಹಾಗೂ ಗೋವಿಂದರಾಜ್ ದಾಸ್ ಅವರ ಮಾತಿನ ಚಕಮಕಿ‌ ನಡೆಯಿತು. ನಂತರ ಸ್ಥಳಕ್ಕೆ ತಹಶಿಲ್ದಾರ್ ಬರದಿದ್ದಲ್ಲಿ ಬೆತ್ತಲೆ ಪ್ರತಿಭಟನೆ ಮಾಡುತ್ತೇನೆ ಎಂದು ತಮ್ಮ ಅಂಗಿಯನ್ನು ಬಿಚ್ಚಿ ಘೋಷಣೆಗಳನ್ನು ಕೂಗಿದರು.

ನಂತರ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಇತರರು ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವೊಲಿಸಿದರು. ಸಮಸ್ಯೆಯನ್ನು ಆದಷ್ಟು ಬೇಗನೇ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ಸಭೆಯ ಪ್ರಾರಂಭದಲ್ಲಿ ಅಧಿಗಾರಿಗಳ ಗೈರಿನ ಬಗ್ಗೆ ಬಗ್ಗೆ ಹಾಗೂ ಕೋರಮ್ ಇಲ್ಲದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಗೈರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಆಹಾರ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಚೆಸ್ಕಾಂ, ಕಾವೇರಿ ನೀರಾವರಿ ನಿಗಮ, ಮಹಿಳೆ ಮತ್ತು ಮಕ್ಕಳ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆ,ಅರಣ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆಗಳು, ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರು ಆಯಾ ಇಲಾಖೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವ ಬಗ್ಗೆ ಭರವಸೆ ನೀಡಿದರು. ನಂತರ ಅಧ್ಯಕ್ಷರ ಅನುಮತಿ ಮೇರೆಗೆ ಕುಡೊಯುವ ನೀರಿನ ಸಮಸ್ಯೆ, ಅಂಗನವಾಡಿಯ ಸಮಸ್ಯೆ, ಚರಂಡಿ, ರಸ್ತೆ ಸೇರಿದಂತೆ ಹತ್ತಲವಾರು ಗ್ರಾಮದ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ನೋಡೆಲ್ ಅಧಿಕಾರಿ ಡಾ: ಕೆ.ನಾಗರಾಜು, ಉಪಾಧ್ಯಕ್ಷೆ ಶಶಿಕಲಾ, ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಓ‌ ಸಂತೋಷ್, ಬಿಲ್ ಕಲೆಕ್ಟರ್ ಅವಿನಾಶ್, ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.