ದಸರಾ ಪಾಸ್‌ಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಸಂಸದ ಯದುವೀರ್ ಒಡೆಯರ್
ಬೆಂಗಳೂರು,:ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ದಸರಾ ಸಮಿತಿ ಸಭೆಯಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾಗವಹಿಸಿ, ಮುಂಬರುವ ನಾಡಹಬ್ಬ ಮೈಸೂರು ದಸರಾ ಸಿದ್ಧತೆಗಳ ಕುರಿತು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಸದರು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿ, ಸಂಸದರಿಗೆ ನೀಡಲಾಗುವ ಎಲ್ಲಾ ವಿಧದ ದಸರಾ ಪಾಸ್‌ಗಳನ್ನು ತಾವು ಸ್ವೀಕರಿಸುವುದಿಲ್ಲ ಎಂದು ತಿಳಿಸಿದರು. ದಸರಾ ಮಹೋತ್ಸವವು ಕೆಲವೇ ವ್ಯಕ್ತಿಗಳಿಗಾಗಿಯಲ್ಲ, ಅದು ಪ್ರತಿಯೊಬ್ಬ ಕನ್ನಡಿಗನ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕನ ಹಬ್ಬವಾಗಿರುವುದರಿಂದ, ಅದರ ಪ್ರಮುಖ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ದಸರಾ ಪಾಸ್‌ಗಳ ವಿತರಣೆಯಲ್ಲಿ ಪಾರದರ್ಶಕತೆ ಇರಬೇಕು. ಆಯ್ದ ಕೆಲವರಿಗೆ ಮಾತ್ರ ಪಾಸ್‌ಗಳು ಸೀಮಿತವಾಗದೆ, ಸಾಮಾನ್ಯ ನಾಗರಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತೆ ವ್ಯವಸ್ಥೆ ರೂಪಿಸಬೇಕು ಎಂದು ಸಭೆಯಲ್ಲಿ ಸಲಹೆ ನೀಡಿದರು.
ಇದಕ್ಕಾಗಿ ಆನ್‌ಲೈನ್ ಅರ್ಜಿ ಮತ್ತು ಪಾರದರ್ಶಕ ಹಂಚಿಕೆ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಅವರು ಕೋರಿದರು. ಇದರಿಂದ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚುವುದರ ಜೊತೆಗೆ ದಸರಾ ನಿಜವಾದ ಜನೋತ್ಸವವಾಗಿ ಮತ್ತಷ್ಟು ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ತಮಗೆ ಸಂಸದರಾಗಿರುವ ಹುದ್ದೆಯ ಆಧಾರದ ಮೇಲೆ ದೊರೆಯುವ ಯಾವುದೇ ಉಚಿತ ಅಥವಾ ವಿಶೇಷ ಪಾಸ್‌ಗಳನ್ನು ತಾವು ಬಳಸುವುದಿಲ್ಲ ಎಂದು ಪುನರುಚ್ಚರಿಸಿದ ಶ್ರೀ ಯದುವೀರ್ ಅವರು, ಆ ಪಾಸ್‌ಗಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ಹಂಚಿಕೆ ಮಾಡುವಂತೆ ಸರ್ಕಾರವನ್ನು ವಿನಂತಿಸಿದರು.
ದಸರಾ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಉತ್ಸವವಾಗಿದ್ದು, ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದ್ದರಿಂದ ಈ ಮಹೋತ್ಸವದಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಹೆಚ್ಚುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದಸರಾ ಆಯೋಜನೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸಲಹೆಗಳನ್ನು ಸರ್ಕಾರದ ಗಮನಕ್ಕೆ ತಂದರು.
ಅರಮನೆ ಆವರಣದಲ್ಲಿರುವ ಆನೆ ಶಿಬಿರದ (Elephant Camp) ಸುತ್ತಮುತ್ತ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಹಿನ್ನೆಲೆಯಲ್ಲಿ, ಜನಸಂದಣಿಯನ್ನು ಸಮರ್ಪಕವಾಗಿ ನಿಯಂತ್ರಿಸಿ, ಆನೆಗಳಿಗೂ ಹಾಗೂ ಸಾರ್ವಜನಿಕರಿಗೂ ಯಾವುದೇ ರೀತಿಯ ತೊಂದರೆ ಅಥವಾ ಅಪಾಯ ಉಂಟಾಗದಂತೆ ಪರಿಣಾಮಕಾರಿ ಜನಸಂದಣಿ ನಿರ್ವಹಣಾ ವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ದಸರಾ ಕಂಬಳ ಆಯೋಜನೆಯ ಬಗ್ಗೆ ಸಮಗ್ರ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಪರಂಪರೆ, ಸ್ಥಳೀಯರ ಅಭಿಪ್ರಾಯ, ಸಾರ್ವಜನಿಕರ ಸುರಕ್ಷತೆ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ಕೋರಿದರು.
ದಸರಾ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಶೇಷ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ, ಮಹಿಳೆಯರು ಹಾಗೂ ಮಕ್ಕಳ ಭದ್ರತೆ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳು ಮತ್ತು ತುರ್ತು ಸೇವೆಗಳ ಸಮರ್ಪಕ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಖಚಿತಪಡಿಸಬೇಕು ಎಂದು ಸಲಹೆ ನೀಡಿದರು.
ಸಂಸದರಾಗಿ, ದಸರಾವನ್ನು ಇನ್ನಷ್ಟು ಭವ್ಯ, ಸುಸಂಘಟಿತ ಹಾಗೂ ಜನಸ್ನೇಹಿ ಉತ್ಸವವನ್ನಾಗಿ ರೂಪಿಸಲು ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ಭರವಸೆ ನೀಡಿದರು.
“ಮೈಸೂರು ದಸರಾ ಕೆಲವೇ ಜನರ ಹಬ್ಬವಲ್ಲ; ಅದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ. ಪ್ರತಿಯೊಬ್ಬ ನಾಗರಿಕನಿಗೂ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಸಮಾನ ಅವಕಾಶ ದೊರೆಯಬೇಕು. ದಸರಾ ಪಾಸ್‌ಗಳ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರಿಗೆ ಸುಲಭ ಪ್ರವೇಶವೇ ಮುಖ್ಯ ಆದ್ಯತೆಯಾಗಬೇಕು” ಎಂದು ಹೇಳಿದರು.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0

