ಬಾಯಲ್ಲಿ ನೀರು ತರಿಸಿದ ಸಿರಿಧಾನ್ಯ ತಿನಿಸುಗಳ ಪ್ರದರ್ಶನ: ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಜಾಥ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ
ಮಡಿಕೇರಿ ಜ.13:-ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಪ್ರಯುಕ್ತ ಮಂಗಳವಾರ ಜಾಥಾ ನಡೆಯಿತು.
ನಗರದ ಕೋಟೆ ಆವರಣದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಚಾಲನೆ ನೀಡಿ ಸಿರಿಧಾನ್ಯ ಬಳಕೆಯಿಂದ ಪೌಷ್ಠಿಕಾಂಶಗಳು ಹೆಚ್ಚಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಸಿರಿಧಾನ್ಯ ಉಪಯೋಗದಿಂದ ದೇಹದಲ್ಲಿ ಆಹಾರದ ಸಮತೋಲನ ಕಾಯ್ದುಕೊಳ್ಳಬಹುದು. ಮಧುಮೇಹ ಮತ್ತು ರಕ್ತದೊತ್ತಡದಿಂದ ದೂರವಿರಬಹುದು ಎಂದು ಜಿ.ಪಂ.ಸಿಇಒ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಾಥಾದಲ್ಲಿ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಉಪ ನಿರ್ದೇಶಕರಾದ ಸೋಮಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಾಂತ್ರಿಕ ಸಹಾಯಕರು, ಎನ್‍ಸಿಸಿ ವಿದ್ಯಾರ್ಥಿಗಳು, ಕೃಷಿಕರು ಇತರರು ಪಾಲ್ಗೊಂಡಿದ್ದರು.
ಜಾಥವು ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನದವರೆಗೆ ನಡೆಯಿತು. ಬಳಿಕ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧಾ ಪ್ರದರ್ಶನ ನಡೆಯಿತು. ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದರು.
ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು, ಸಾಮೆ ಮತ್ತಿತರದಿಂದ ಮಾಡಿರುವ ವಿವಿಧ ರೀತಿಯ ತಿಂಡಿ ತಿನಿಸುಗಳು ಪ್ರದರ್ಶನದಲ್ಲಿ ನೋಡುಗರ ಬಾಯಲ್ಲಿ ನೀರು ತರಿಸಿತು.
ಸಿರಿಧಾನ್ಯದಲ್ಲಿ ಮಾಡಿದ್ದ ರಾಗಿ ದೋಸೆ, ನಿಪ್ಪಟ್ಟು, ಚಟ್ನಿ, ಚಕ್ಕುಲಿ, ಕೋಡು ಬಳೆ, ಕಜ್ಜಾಯ, ಮಿಲ್ಲೇಟ್ ಪಾಯಸ, ಮಿಲ್ಲೇಟ್ ಪಲಾವ್, ರಾಗಿ ಬಿಸ್ಕೇಟ್, ಬಿಳಿ ಜೋಳದ ಬಿಸ್ಕೇಟ್, ಮಿಲ್ಲೇಟ್ ಕೇಕ್, ಸಿರಿಧಾನ್ಯ ಪಡ್ಡು, ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಚಟ್ನಿ, ಸೀಮೆಬದನೆ ಕಟ್ಲೆಟ್ಟ್, ನವಣೆ ದೋಸೆ, ಹಲಸಿನ ಕಟ್ಲೆಟ್ಟ್, ಬೂಕಿ ಕಜ್ಜಾಯ, ರಾಗಿ ಲಡ್ಡು, ಗುಳಿಗೆ ಪಾಯಸ, ಸಜ್ಜೆನಾಡು, ನವಣೆ ಕಟ್ಲೆಟ್ಟ್, ಪಪ್ಪಾಯಿ ಹಲ್ವ, ಸಜ್ಜೆ ಹಲ್ವ, ಸಿರಿಧಾನ್ಯ ಒಡೆ, ಮೆಂತ್ಯೆ ಸೊಪ್ಪಿನ ಒಡೆ, ಮೆಂತ್ಯೆ ಹಿಟ್ಟು, ರಾಗಿ ಮತ್ತು ಕ್ಯಾರೇಟ್ ಕೇಕ್, ಶಾಮೆ ಪುಡಿ ಮತ್ತು ಕಾಳುಕಡುಬು, ಹುರಿಕಡಲೆ ಚಿಕ್ಕಿ, ಇರಲೆಕಾಯಿ ಗೊಜ್ಜು, ಗೋದಿ ಹಲ್ವ, ಸಿಹಿ ಕಡುಬು, ನವಣೆ ಬಿಸಿಬೇಳೆ ಬಾತ್, ರಾಗಿ ದೋಸೆ, ನವಣೆ ಉಪ್ಪಿಟ್ಟು, ರಾಗಿ ಹಲ್ವ, ರಾಗಿ ಮಿಕ್ಸರ್, ಕಕ್ಕಡ ಸೊಪ್ಪು ಪಾಯಸ, ಸಿಹಿ ಗೆಣಸು ಖಾರ, ಇರಲೆ ಉಪ್ಪಿನಕಾಯಿ, ನವಣೆ ರೊಟ್ಟಿ, ಶುಂಠಿ ಚಟ್ನಿ, ಕೆಸಸಾರು, ಮಾವಿನಕಾಯಿ ಜೂಸು, ಕುಂಬಳ ಕೊಡಿ ಪಲ್ಯ, ಬರಗು ಒಡೆ, ಸಿರಿಧಾನ್ಯ ನಿಪ್ಪಟ್ಟು, ಅಡಿಕೆ ಪುಟ್ಟು, ನವಣೆ ಬರಗು ಹಲ್ವ, ಪತ್ರೋಡೆ ಬೇಂದಿ ಹೀಗೆ ಹಲವು ಖಾದ್ಯಗಳು ಸ್ಪರ್ಧೆಯಲ್ಲಿ ಗಮನ ಸೆಳೆದವು.
ಜಿಲ್ಲಾ ಮಟ್ಟಕ್ಕೆ ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನವಾಗಿ ರೂ. 5 ಸಾವಿರ, ದ್ವಿತೀಯ ಬಹುಮಾನವಾಗಿ ರೂ. 3 ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ. 2 ಸಾವಿರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಸಿರಿಧಾನ್ಯ ಉಪಯೋಗದಿಂದ ಹಲವು ರೀತಿಯ ಪೋಷಕಾಂಶಗಳು ದೊರೆಯಲಿದ್ದು, ಇವುಗಳನ್ನು ಬಳಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಸಿರಿಧಾನ್ಯ ಬಳಕೆಯಿಂದ ಮೂಳೆಯು ಸಹ ಗಟ್ಟಿಯಾಗಲಿದೆ. ಕ್ಯಾಲ್ಸಿಯಂ ದೊರೆಯಲಿದೆ. ಆದ್ದರಿಂದ ಸಿರಿಧಾನ್ಯ ಬಳಕೆ ಅತ್ಯಗತ್ಯ ಎಂದರು.