National News

ಸೋಫಾದಿಂದ ಎದ್ದ ಕ್ಷಣದಲ್ಲಿ ಪಿಸ್ತೂಲ್ ಸಿಡಿದು ಎನ್‌ಆರ್‌ಐ ಸಾವು

admincoorgdaily

Photo credit: TV09

ಫಿರೋಜ್‌ಪುರ, ಜ. 1: ಪಂಜಾಬ್‌ ನ ಫಿರೋಜ್‌ಪುರ ಜಿಲ್ಲೆಯಲ್ಲಿ ಸೋಫಾದಿಂದ ಎದ್ದು ನಿಲ್ಲುವ ವೇಳೆ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಲೋಡ್ ಮಾಡಿದ ಪಿಸ್ತೂಲ್ ಆಕಸ್ಮಿಕವಾಗಿ ಸಿಡಿದು ಅನಿವಾಸಿ ಭಾರತೀಯನೊಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಧನಿ ಸುಚಾ ಸಿಂಗ್ ಗ್ರಾಮದ ನಿವಾಸಿ ಹರ್ಪಿಂದರ್ ಸಿಂಗ್ ಅಲಿಯಾಸ್ ಸೋನು ಇತ್ತೀಚೆಗೆ ವಿದೇಶದಿಂದ ಸ್ವಗ್ರಾಮಕ್ಕೆ ಮರಳಿದ್ದರು. ಅವರು ಮನೆಯೊಳಗೆ ಸಂಬಂಧಿಕರೊಂದಿಗೆ ಸೋಫಾದಲ್ಲಿ ಕುಳಿತಿದ್ದಾಗ, ಎದ್ದು ನಿಲ್ಲುವ ಸಂದರ್ಭದಲ್ಲಿ ಪಿಸ್ತೂಲ್ ಸಿಡಿದು ಗುಂಡು ಅವರ ಕಿಬ್ಬೊಟ್ಟೆಗೆ ತಗುಲಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಶಬ್ದ ಕೇಳಿದ ತಕ್ಷಣ ಕುಟುಂಬಸ್ಥರು ಹರ್ಪಿಂದರ್ ಸಿಂಗ್ ಅವರನ್ನು ತುರ್ತುವಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರೂ, ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯ ದೃಶ್ಯಗಳು ಮನೆಯೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಹರ್ಪಿಂದರ್ ಸಿಂಗ್ ಇತ್ತೀಚೆಗೆ ವಿವಾಹವಾಗಿದ್ದು, ಅವರಿಗೆ ಎರಡು ವರ್ಷದ ಹೆಣ್ಣು ಮಗು ಇದೆ. ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ ಅವರ ಗ್ರಾಮದಲ್ಲಿ ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಲಾಯಿತು.