ಗರ್ಭಿಣಿಯ ಅನಿರೀಕ್ಷಿತ ಸಾವು ಪ್ರಕರಣಕ್ಕೆ ಹೊಸ ತಿರುವು: 10 ದಿನಗಳ ಬಳಿಕ ಬಯಲಾದ ಅಸಲಿ ಸತ್ಯ
ಧರ್ಮಪುರಿ, ಡಿ.12: ಧರ್ಮಪುರಿ ಸಮೀಪ ಗರ್ಭಿಣಿಯೊಬ್ಬರ ಸಾವಿನ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಕುಟುಂಬಸ್ಥರ ಅನುಮಾನ ಮತ್ತು ಪೊಲೀಸರ ತೀವ್ರ ತನಿಖೆಯ ಫಲವಾಗಿ ಮರಣದ ನಿಜಸ್ವರೂಪ 10 ದಿನಗಳ ಬಳಿಕ ಬೆಳಕಿಗೆ ಬಂದಿದೆ. ಮೆಟ್ಟಿಲುಗಳಿಂದ ಬಿದ್ದು ಮೃತಪಟ್ಟಳು ಎಂಬ ವರದಿ ಸುಳ್ಳಾಗಿದ್ದು, ಮನೆಯಲ್ಲಿಯೇ ಅಕ್ರಮವಾಗಿ ನಡೆದ ಗರ್ಭಪಾತವೇ ರಮ್ಯಾ ಎಂಬ ಮಹಿಳೆಯ ಸಾವಿಗೆ ಕಾರಣವೆಂದು ಪತ್ತೆಯಾಗಿದೆ.
ಎರಿಯೂರು ಬಳಿಯ ಪೂಚೂರಿನ 26 ವರ್ಷದ ಕೆ. ರಮ್ಯಾ, ಇಬ್ಬರು ಹೆಣ್ಣುಮಕ್ಕಳ ತಾಯಿ. ಇತ್ತೀಚೆಗೆ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದ ಅವರು ಡಿಸೆಂಬರ್ 1ರಂದು “ಮೆಟ್ಟಿಲುಗಳಿಂದ ಜಾರಿ ಬಿದ್ದರು” ಎಂದು ಪತಿ ಕಣ್ಣನ್ ತಮ್ಮ ಕುಟುಂಬ ಮತ್ತು ಸಂಬಂಧಿಕರಿಗೆ ತಿಳಿಸಿದ್ದರು. ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರೂ, ಘಟನೆ ಬಗ್ಗೆ ಅನುಮಾನಗಳು ಅವರ ಮನಸ್ಸನ್ನು ಬಿಡಲಿಲ್ಲ.
ಅನುಮಾನ ಗಾಢವಾದ ಬಳಿಕ, ರಮ್ಯಾ ಅವರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪ್ರಕರಣದ ಬೆನ್ನಟ್ಟಿದ ಎರಿಯೂರು ಪೊಲೀಸರು ವಿಚಾರಣೆ ನಡೆಸಿದಾಗ, ಕಣ್ಣನ್ ಹೇಳಿಕೆಯಲ್ಲಿ ಸಂಷಯ ಕಾಣಿಸಿಕೊಂಡಿತು. ಮತ್ತಷ್ಟು ವಿಚಾರಣೆ ಮಾಡಿದಾಗ, ಮನೆಯಲ್ಲಿಯೇ ಗರ್ಭಪಾತ ನಡೆಸುವಾಗ ರಮ್ಯಾ ಮೃತಪಟ್ಟಿರುವುದು ಬೆಳಕಿಗೆ ಬಂತು.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ರಮ್ಯಾರ ಸ್ಕ್ಯಾನಿಂಗ್ ವೇಳೆ ಹೆಣ್ಣುಮಗು ಹುಟ್ಟಲಿದೆ ಎಂಬುದು ತಿಳಿದಿದ್ದರಿಂದ ಕಣ್ಣನ್ ಅಸಮಾಧಾನಗೊಂಡಿದ್ದ. ಮಗುವಿನ ಲಿಂಗ ಪತ್ತೆಯಾದ ಬಳಿಕ ಮನೆಯಲ್ಲೇ ಗರ್ಭಪಾತ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ನರ್ಸ್ ಸುಗನ್ಯಾ (35) ಹಾಗೂ ಸೇಲಂ ಮೂಲದ ಬ್ರೋಕರ್ ವನಿತಾ (35) ಅವರನ್ನು ಸಂಪರ್ಕಿಸಿದ್ದಾಗಿ ತಿಳಿದುಬಂದಿದೆ.
ಗರ್ಭಪಾತ ಪ್ರಕ್ರಿಯೆಯ ವೇಳೆ ರಮ್ಯಾ ಅವರ ಆರೋಗ್ಯ ಹದಗೆಟ್ಟು ತೀವ್ರ ರಕ್ತಸ್ರಾವವಾಗಿ ಅವರು ಮೃತಪಟ್ಟರು. ಬಳಿಕ ಕಣ್ಣನ್ ಘಟನೆ ಮುಚ್ಚಿಡಲು ಮೆಟ್ಟಿಲು ಅಪಘಾತದ ಸುಳ್ಳು ಕಥೆಯನ್ನು ಕುಟುಂಬ ಮತ್ತು ಪೊಲೀಸರಿಗೆ ಹೇಳಿದ್ದ.
ಪೊಲೀಸರು ಈ ಘಟನೆಯಲ್ಲಿ ಪತಿ ಕಣ್ಣನ್, ನರ್ಸ್ ಸುಗನ್ಯಾ ಮತ್ತು ಬ್ರೋಕರ್ ವನಿತಾ—ಈ ಮೂವರನ್ನೂ ಬಂಧಿಸಿದ್ದಾರೆ. ಅಕ್ರಮ ಗರ್ಭಪಾತ, ಸತ್ಯ ಮರೆಮಾಡಿದ ಪ್ರಕರಣ ಮತ್ತು ಸಂಬಂಧಿತ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
