ಸರಕಾರದ ಉಚಿತ ಕೆಮ್ಮಿನ ಸಿರಪ್ ಸೇವಿಸಿ ಒಂದು ಮಗು ಮೃತ್ಯು, ಇನ್ನೊಂದು ಗಂಭೀರ | ಸಿರಪ್ ಕುಡಿದ ವೈದ್ಯನೂ ಅಸ್ವಸ್ಥ!

Sep 30, 2025 - 19:29
 0  453
ಸರಕಾರದ ಉಚಿತ ಕೆಮ್ಮಿನ ಸಿರಪ್ ಸೇವಿಸಿ ಒಂದು ಮಗು ಮೃತ್ಯು, ಇನ್ನೊಂದು ಗಂಭೀರ  | ಸಿರಪ್ ಕುಡಿದ ವೈದ್ಯನೂ ಅಸ್ವಸ್ಥ!
Photo credit: INDIA TODAY

ಜೈಪುರ: ರಾಜಸ್ಥಾನದಲ್ಲಿ ಸರ್ಕಾರದ ಉಚಿತ ಔಷಧ ಯೋಜನೆಯಡಿ ನೀಡಲಾದ ಕೆಮ್ಮಿನ ಸಿರಪ್ ಸೇವಿಸಿದ ನಂತರ ಒಂದು ಮಗು ಸಾವನ್ನಪ್ಪಿ, ಮತ್ತೊಂದು ಮಗು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಆತಂಕ ಮೂಡಿಸಿದೆ. ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದ್ದು, ಸಿರಪ್ ಪೂರೈಕೆಯನ್ನು ಸ್ಥಗಿತಗೊಳಿಸಿ ತಯಾರಿಕೆ ಹಾಗೂ ವಿತರಣೆಯ ಕುರಿತು ತನಿಖೆ ಆರಂಭಿಸಿದೆ.

ಸಿಕಾರ್ ಜಿಲ್ಲೆಯ ಖೋರಿ ಬ್ರಹ್ಮಣನ್ ಗ್ರಾಮದಲ್ಲಿ ಐದು ವರ್ಷದ ನಿತ್ಯನ್ಸ್ ಭಾನುವಾರ ರಾತ್ರಿ ಸಿರಪ್ ಸೇವಿಸಿದ ನಂತರ ಬೆಳಗಿನ ಜಾವ ಆರೋಗ್ಯ ಹದಗೆಟ್ಟು ಸಾವನ್ನಪ್ಪಿತು. ಕುಟುಂಬದವರು ತುರ್ತುವಾಗಿ ಎಸ್‌ಕೆ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದರು.

 “ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಿಳಿಯಲಿದೆ” ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಕೆ.ಕೆ. ಅಗರವಾಲ್ ತಿಳಿಸಿದ್ದಾರೆ.

ಇದೇ ರೀತಿ, ಭರತ್‌ಪುರ ಜಿಲ್ಲೆಯ ಕಲ್ಸಾಡ ಗ್ರಾಮದಲ್ಲಿ ಮೂರು ವರ್ಷದ ಗಗನ್ ಇದೇ ಬ್ರಾಂಡ್‌ನ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಸಿರಪ್ ಐಪಿ (13.5 ಮಿಗ್ರಾಂ/5 ಮಿಲಿ) ಸೇವಿಸಿದ ನಂತರ ಪ್ರಜ್ಞೆ ತಪ್ಪಿ, ಹೃದಯ ಬಡಿತ ನಿಧಾನಗೊಂಡಿತು. ತಕ್ಷಣವೇ ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ಸ್ಥಳಾಂತರಿಸಲ್ಪಟ್ಟಿದ್ದು, ಪ್ರಸ್ತುತ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದೆ.

 ಘಟನೆಯ ಗಂಭೀರತೆಯನ್ನು ಮನಗಂಡು, ಭರತ್‌ಪುರದ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ವೈದ್ಯ ಡಾ. ತಾರಾಚಂದ್ ಯೋಗಿಯವರೂ ಅದೇ ಸಿರಪ್ ಸೇವಿಸಿ ಅಸ್ವಸ್ಥರಾಗಿರುವುದು ವರದಿಯಾಗಿದೆ.

ಬಯಾನಾ ಬ್ಲಾಕ್ ಮುಖ್ಯ ವೈದ್ಯಾಧಿಕಾರಿ ಡಾ. ಜೋಗೇಂದ್ರ ಗುರ್ಜರ್ ಹೇಳುವಂತೆ, “ನಿರ್ದಿಷ್ಟ ಬ್ಯಾಚ್ ಸಿರಪ್ ಇದಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ಇದೆ. ಮುನ್ನೆಚ್ಚರಿಕೆಯ ಕ್ರಮವಾಗಿ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆ ಬ್ಯಾಚ್ ಪೂರೈಕೆ ಹಾಗೂ ವಿತರಣೆಯನ್ನು ತಕ್ಷಣ ನಿಲ್ಲಿಸಲಾಗಿದೆ.”

 ರಾಜ್ಯ ಸರ್ಕಾರವು ಸಿರಪ್ ತಯಾರಕ ಕಂಪೆನಿ ಮತ್ತು ಪೂರೈಕೆ ವ್ಯವಸ್ಥೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದು, ವರದಿ ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0