ಛಾಯಚಿತ್ರಗಾರರು ಆರ್ಥಿಕ ಮತ್ತು ಸ್ವಾವಲಂಬಿ ಬದುಕಿನ ಬಗ್ಗೆ ಸಂಕಷ್ಟ ಎದುರಿಸುತ್ತಿದ್ದಾರೆ; ಸಂಘದ ಅಧ್ಯಕ್ಷ ರವೀಂದ್ರ ಆತಂಕ

ಛಾಯಚಿತ್ರಗಾರರು ಆರ್ಥಿಕ ಮತ್ತು ಸ್ವಾವಲಂಬಿ ಬದುಕಿನ ಬಗ್ಗೆ ಸಂಕಷ್ಟ ಎದುರಿಸುತ್ತಿದ್ದಾರೆ; ಸಂಘದ ಅಧ್ಯಕ್ಷ ರವೀಂದ್ರ ಆತಂಕ

ಗೋಣಿಕೊಪ್ಪ: ಕೊರೋನಾ ಕಾಲ ಘಟ್ಟದಿಂದ ಇಂದಿನ ಯುದ್ಧದ ವಿದ್ಯಮಾನಗಳ ಅವಧಿಯೊಳಗೆ ಛಾಯಚಿತ್ರಗಾರರು ಆರ್ಥಿಕ ಮತ್ತು ಸ್ವಾವಲಂಬಿ ಬದುಕಿನ ಬಗ್ಗೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದಕ್ಷಿಣ ಕೊಡಗಿನ ಛಾಯಾ ಚಿತ್ರಗಾರರ ಸಂಘದ ಅಧ್ಯಕ್ಷ ರವೀಂದ್ರ ಆತಂಕ ವ್ಯಕ್ತಪಡಿಸಿದರು.

ಗೋಣಿಕೊಪ್ಪದ ಸೆಂಟ್ರಮ್ ಬಿಲ್ಡಿಂಗ್‌ನಲ್ಲಿರುವ ಸೂರ್ಯ ಸ್ಟುಡಿಯೋದಲ್ಲಿ ನಡೆದ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಇವೆಂಟ್ ಮ್ಯಾನೇಂಜ್‌ಮೆಂಟ್ ಎಂಬ ಹೆಸರಿನಲ್ಲಿ ಆನ್ಲೈನ್, ಫೇಸ್ ಬುಕ್, ವೆಬ್‌ಸೈಟ್‌ಗಳ ಮೂಲಕ ಪರಿಚಯವಿದವರಿಗೆ ಶುಭ ಸಮಾರಂಭಗಳ ಛಾಯಾಚಿತ್ರ ತೆಗೆಯಲು ಜನರು ಅನುವು ಮಾಡಿಕೊಡುತ್ತಿದ್ದಾರೆ. ಇದರಿಂದ ಜನರು ಮೋಸ ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಬಂದ ಹಲವಾರು ದೂರುಗಳನ್ನು ಸಂಘ ಖುದ್ದು ಹಾಜರಿದ್ದು ಸಮಸ್ಯೆಗಳನ್ನು ಬಗೆಹರಿಸಲಾಗಿದೆ.

ವಿನಾಕಾರಣ ಸಮಸ್ಯೆಯನ್ನು ಜನರು ಎಳೆದುಕೊಳ್ಳುವ ಮೊದಲು ಸ್ಥಳೀಯ ಛಾಯ ಚಿತ್ರಗಾರರಿಗೆ ಆದ್ಯತೆ ನೀಡಿದಾಗ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ.

  ಈ ಹಿನ್ನೆಲೆಯಲ್ಲಿ ಜನರು ತಮ್ಮ ಕಾರ್ಯಕ್ರಮಗಳಿಗೆ ಫೋಟೋ ತೆಗೆಯುವ ವಿಚಾರಕ್ಕೆ ಸ್ಥಳೀಯರಿಗೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಕೊರೋನಾ ಮತ್ತು ಇಂದಿನ ಯುದ್ಧದ ವಿಚಾರಗಳಿಂದಾಗಿ ಫೋಟೋ ತೆಗೆಯಲು ಬೇಕಾದ ಕೆಲವು ಪರಿಹಾರಗಳನ್ನು ಒದಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕ ಬೆಲೆಯ ಬಿಸಿ ವೃತ್ತಿಪರ ಛಾಯಾಚಿತ್ರಗಾರರನ್ನು ಸುಡುತ್ತಿದೆ.

  ಕ್ಯಾಮೆರಾಗಳ ಬೆಲೆಯೂ ಗಗನಕೇರಿದೆ, ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್, ಫೋಟೋ ಪ್ರಿಂಟ್, ಆಲ್ಬಮ್ ಇತರ ಎಲ್ಲಾ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ.

ಈ ಹಿನ್ನೆಲೆಯೊಳಗೆ ಛಾಯಚಿತ್ರಗಾರರು ವೃತ್ತಿಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ 10 ವರ್ಷಗಳಿಂದ ಪರಿಷ್ಕರಿಸದೆ ಇದ್ದ ಫೋಟೋ ವೃತ್ತಿಯ ದರವನ್ನು ಏರಿಸುವ ನಿರ್ಧಾರವನ್ನು ಸಂಘದ ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ. ಆ ನಿಟ್ಟಿನಲ್ಲಿ 2026 ಏಪ್ರಿಲ್ ನಿಂದ ಹೊಸ ದರಗಳಂತೆ ಶೇಕಡ ಹತ್ತರಷ್ಟು ಹೆಚ್ಚಿಸಲು ಸಂಘ ತೀರ್ಮಾನಿಸಿದೆ, ಇದಕ್ಕೆ ಜನರ ಸಹಕಾರ ಬಹು ಅಗತ್ಯ ಎಂದು ಮನವಿ ಮಾಡಿದರು.

ಸಂಘದ ಕಾರ್ಯದರ್ಶಿ ರಾಮದಾಸ್ ಮಾತನಾಡಿ, ಇತ್ತೀಚಿನ ಬೆಳವಣಿಗೆಯಲ್ಲಿ ಮೊಬೈಲ್‌ಗಳಲ್ಲಿ ಫೋಟೋಗಳನ್ನು ಸೆರೆ ಹಿಡಿದು ಜೆರಕ್ಸ್ ಅಂಗಡಿ ಅಥವಾ ಸೈಬರ್ ಸೆಂಟರ್ ಗಳಲ್ಲಿ ತಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳುತ್ತಿರುವುದರಿಂದ ಛಾಯಚಿತ್ರಗಾರರು ಅತಂತ್ರ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ.

ಜತೆಗೆ ಹೊರಜಿಲ್ಲೆಯವರಿಗೂ ಮದುವೆ ಮತ್ತು ಇತರೆ ಸಮಾರಂಭಗಳನ್ನು ನೀಡುತ್ತಿರುವುದರಿಂದ ಸ್ಥಳೀಯ ಛಾಯಾಚಿತ್ರಗಾರರು ಕೆಲಸದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ್ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಂಜಿತ್ ವಿ.ಜಿ ಉಪಸ್ಥಿತರಿದ್ದರು.