ಪೊನ್ನಂಪೇಟೆ-ಕಾನೂರು ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಕೋದೇಂಗಡ ಜಿ ಕಾರ್ಯಪ್ಪ ಹೆಸರು ನಾಮಕರಣ
ಪೊನ್ನಂಪೇಟೆ, ಜು. 18: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮದ ಆದರ್ಶಗಳನ್ನು ಇಂದಿನ ಯುವಜನತೆಗೆ ಪರಿಚಯಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದರು.
ಪೊನ್ನಂಪೇಟೆ–ಕಾನೂರು ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಕೋದೇಂಗಡ ಜಿ. ಕಾರ್ಯಪ್ಪ ಅವರ ಹೆಸರನ್ನು ನಾಮಕರಣ ಮಾಡಿದ ಬಳಿಕ ನಡೆದ ಸ್ಮರಣಾ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಜೈಲು ಶಿಕ್ಷೆ ಅನುಭವಿಸಿ ತಮ್ಮ ವೈಯಕ್ತಿಕ ಬದುಕನ್ನೇ ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಸೇವೆ, ತ್ಯಾಗ ಮತ್ತು ದೇಶಭಕ್ತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಸ್ಮರಣಾ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿವೆ ಎಂದರು.
ಹಿಂದಿನ ದಿನಗಳಲ್ಲಿ ಸಮಾಜಮುಖಿ ಸಂಘಟನೆಗಳು ಹಾಗೂ ವಾರಪತ್ರಿಕೆಗಳು ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿದ್ದರೂ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವ ಸಂಘಟನೆಗಳ ಅಗತ್ಯತೆ ಇಂದಿಗೂ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಯುವಕರು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿ, ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಿಗ್ಗಟ್ಟ್‌ನಾಡ್ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕೊಟ್ಟುಕತ್ತೀರ ಪಿ. ಸೋಮಣ್ಣ ಮಾತನಾಡಿ, ಕೊಡಗು ಜಿಲ್ಲೆಯ 300ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಸಂಗ್ರಹಿಸಿ ಪುಸ್ತಕ ಹಾಗೂ ಚಿತ್ರಗಳ ಮೂಲಕ ಸಾರ್ವಜನಿಕರಿಗೆ ಪರಿಚಯಿಸುವ ಕಾರ್ಯವನ್ನು ವೇದಿಕೆ ಕೈಗೊಂಡಿದೆ ಎಂದರು. ಈಗಾಗಲೇ ಐದು ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ನಾಮಕರಣ ಮಾಡುವ ಕಾರ್ಯ ಆರಂಭಗೊಂಡಿದ್ದು, ಅಗತ್ಯ ಅನುಮತಿಗಳನ್ನು ಪಡೆದು ಹೆಸರು ಫಲಕಗಳನ್ನು ಅಳವಡಿಸುವ ಮೂಲಕ ಸ್ಥಳೀಯ ಇತಿಹಾಸವನ್ನು ಸಂರಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟೀಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ ಪೊನ್ನಂಪೇಟೆ–ಕಾನೂರು ರಸ್ತೆಗೆ ಕೋದೇಂಗಡ ಜಿ. ಕಾರ್ಯಪ್ಪ ಅವರ ಹೆಸರನ್ನು ನಾಮಕರಣ ಮಾಡುವ ಸುಮಾರು 25–30 ವರ್ಷಗಳ ಕನಸು ಇದೀಗ ನನಸಾಗಿದೆ. ಹಲವು ವರ್ಷಗಳ ಮನವಿಗೆ ಸ್ಪಂದಿಸಿದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರ ಪ್ರಯತ್ನದಿಂದ ಸರ್ಕಾರದ ಅನುಮೋದನೆ ದೊರೆತು ನಾಮಫಲಕ ಅನಾವರಣ ಸಾಧ್ಯವಾಯಿತು ಎಂದು ಅವರು ಕೃತಜ್ಞತೆ ಸಲ್ಲಿಸಿದರು. ಸ್ವಾತಂತ್ರ್ಯವು ಅನೇಕ ವೀರರ ತ್ಯಾಗದ ಫಲವಾಗಿರುವುದರಿಂದ ಅದನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪಕ್ಷಾತೀತವಾಗಿ ದೇಶಭಕ್ತಿ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಬೆಳೆಸುವ ಮನೋಭಾವ ಎಲ್ಲರಲ್ಲೂ ಮೂಡಬೇಕು ಎಂದು ಅವರು ಕರೆ ನೀಡಿದರು.
ನೆರೆಯಂಡಮ್ಮನ ಸುಬ್ರಮಣಿ ಪ್ರಾರ್ಥಿಸಿದರು,ಚೇಂದಿರ ಬೋಪಣ್ಣ ಸ್ವಾಗತಿಸಿದರು, ಐನಂಡ ಮಂದಣ್ಣ ಸರ್ವರನ್ನೂ ವಂದಿಸಿದರು. ಕಾರ್ಯಕ್ರಮದಲ್ಲಿ ವೇದಿಕೆ ಕಾರ್ಯದರ್ಶಿ ಚೇಂದೀರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ಜಂಟಿ ಕಾರ್ಯದರ್ಶಿ ನೆರೆಯಂಡಮ್ಮನ ಸುಬ್ರಮಣಿ, ನಿರ್ದೇಶಕರಾದ ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಕಾಟೀಮಾಡ ಡಿಕ್ಕಿ ಅಣ್ಣಯ್ಯ,ಮಲ್ಲಂಡ ರಾಜ ಸುಬ್ಬಯ್ಯ, ಕೋದೇಂಗಡ ವಿಠಲ, ಮುದ್ದಿಯಡ ಸೋಮಯ್ಯ, ಐನಂಡ ತಮ್ಮಯ್ಯ, ಮೇಚಮಾಡ ಪೊನ್ನಪ್ಪ, ವೇದಿಕೆ ಸದಸ್ಯರು, ಸ್ವಾತಂತ್ರ್ಯ ಹೋರಾಟಗಾರ ಕೋದೇಂಗಡ ಜಿ. ಕಾರ್ಯಪ್ಪ ಅವರ ಪುತ್ರ ಕೋದೇಂಗಡ ರವಿ, ಕೋದೇಂಗಡ ಕುಟುಂಬ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
