ಇಂಡಿಗೋ ವಿಮಾನ ರದ್ದಾಗಿದ್ದರಿಂದ ವಧು–ವರರಿಲ್ಲದೇ ಹುಬ್ಬಳ್ಳಿಯಲ್ಲಿ ಆರತಕ್ಷತೆ! ಆನ್‌ಲೈನ್‌ನಲ್ಲಿ ಆಶೀರ್ವಾದ ಪಡೆದ ನವದಂಪತಿ

ಇಂಡಿಗೋ ವಿಮಾನ ರದ್ದಾಗಿದ್ದರಿಂದ ವಧು–ವರರಿಲ್ಲದೇ ಹುಬ್ಬಳ್ಳಿಯಲ್ಲಿ ಆರತಕ್ಷತೆ!   ಆನ್‌ಲೈನ್‌ನಲ್ಲಿ ಆಶೀರ್ವಾದ ಪಡೆದ ನವದಂಪತಿ
Photo credit: INDIA TODAY

ಹುಬ್ಬಳ್ಳಿ: ಇಂಡಿಗೋ ಏರ್‌ಲೈನ್ಸ್‌ ವಿಮಾನಗಳ ಕಾರ್ಯಾಚರಣೆಯಲ್ಲಿ ಉಂಟಾದ ಅಡಚಣೆಗಳಿಂದ ದೇಶದಾದ್ಯಂತ ಹಲವಾರು ವಿಮಾನಗಳು ರದ್ದಾಗಿರುವ ಪರಿಣಾಮ, ಹುಬ್ಬಳ್ಳಿಯಲ್ಲಿ ಅಪರೂಪದ ಮತ್ತು ಕುತೂಹಲಕಾರಿಯಾದ ಘಟನೆ ಜರುಗಿದೆ. ವಧು–ವರರು ಕಾರ್ಯಕ್ರಮಕ್ಕೆ ಮುನ್ನವೇ ವಿಮಾನ ರದ್ದಾಗಿ ಸಿಲುಕಿ ಭುವನೇಶ್ವರದಲ್ಲೇ ಉಳಿಯಬೇಕಾದ ಸ್ಥಿತಿ ಉಂಟಾಗಿದ್ದು, ಆರತಕ್ಷತೆಯನ್ನು ಆನ್‌ಲೈನ್ ಮೂಲಕವೇ ನಡೆಸುವ ಅನಿವಾರ್ಯತೆ ಎದುರಾಯಿತು.

ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಒಡಿಶಾದ ಸಂಗ್ರಾಮ್ ದಾಸ್ ನವೆಂಬರ್ 23ರಂದು ಭುವನೇಶ್ವರದಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಡಿಸೆಂಬರ್ 3ರಂದು ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಕಲ್ಯಾಣಮಂಟಪ ಬುಕ್ ಆಗಿ, ಎಲ್ಲಾ ಸಿದ್ಧತೆಗಳೂ ಮುಗಿದು, ಸಂಬಂಧಿಕರು ಕೂಡ ಆಗಮಿಸಿದ್ದರು.

ಈ ನಡುವೆ, ಡಿಸೆಂಬರ್ 2ರ ಬೆಳಗ್ಗೆ 9ರಿಂದಲೇ “ವಿಮಾನ ವಿಳಂಬ” ಎಂಬ ಮಾಹಿತಿಯನ್ನು ನೀಡುತ್ತಿದ್ದ ಇಂಡಿಗೋ ಸಿಬ್ಬಂದಿ, ಕೊನೆಗೆ ಸುಮಾರು 18–20 ಗಂಟೆಗಳ ಕಾಲ ಕಾಯಿಸಿದ ಬಳಿಕ ಡಿಸೆಂಬರ್ 3ರ ಬೆಳಿಗ್ಗೆ ವಿಮಾನವನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿದರು. ಹೀಗಾಗಿ, ವಧು–ವರರು ಮತ್ತು ಕುಟುಂಬದವರು ಹುಬ್ಬಳ್ಳಿ ತಲುಪುವ ಪರ್ಯಾಯ ಮಾರ್ಗವೇ ಕಂಡುಕೊಳ್ಳಲಾಗಲಿಲ್ಲ.

ವಿಚಿತ್ರ ಪರಿಸ್ಥಿತಿಯಲ್ಲಿ, ಆರತಕ್ಷತೆಯನ್ನು ರದ್ದುಪಡಿಸುವ ಬದಲಿಗೆ, ವಧುವಿನ ತಂದೆ ಅನಿಲ್ ಕುಮಾರ್ ಕ್ಷೀರಸಾಗರ ಹಾಗೂ ತಾಯಿಯೇ ವಧು–ವರರ ಕುರ್ಚಿಯಲ್ಲಿ ಕುಳಿತು ಶಾಸ್ತ್ರಗಳನ್ನು ಮುಗಿಸಿದರು. ಮತ್ತೊಂದೆಡೆ, ನವದಂಪತಿ ಭುವನೇಶ್ವರದಲ್ಲಿ ಸಜ್ಜಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಕ್ಕೆ ಸಂಪರ್ಕಗೊಂಡರು. ಆಗಮಿಸಿದ್ದ ಆತಿಥಿಗಳು ಕೂಡ ಪರದೆ ಮೂಲಕವೇ ದಂಪತಿಗೆ ಆಶೀರ್ವಾದ ಸಲ್ಲಿಸಿದರು.

“ನಾವು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೆವು. ವಿಮಾನ ವಿಳಂಬದ ಬಗ್ಗೆ ಸರಿಯಾದ ಮಾಹಿತಿ ಮೊದಲೇ ಲಭ್ಯವಾಗಿದ್ದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಕೊನೆಯ ಕ್ಷಣದಲ್ಲಿ ವಿಮಾನ ರದ್ದು ಎನ್ನವಾಗ ನಮ್ಮ ಕೈಗೇನೂ ಉಳಿಯಲಿಲ್ಲ,” ಎಂದು ವಧುವಿನ ತಂದೆ ಅನಿಲ್ ಕುಮಾರ್ ಪ್ರತಿಕ್ರಿಯಿಸಿದರು.

“ವಿಮಾನ ಹೊರಡುತ್ತದೆ, ಸ್ವಲ್ಪ ತಡವಾಗುತ್ತದೆ” ಎಂದು ನಿರಂತರವಾಗಿ ಸಮಯ ಹರಣ ಮಾಡುತ್ತಾ ಕೊನೆಗೆ ರದ್ದುಗೊಳಿಸಿದುದರಿಂದ ಕಾರ್ಯಕ್ರಮ ಹಾಳಾಗಿದೆಯೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ನಿರ್ಲಕ್ಷ್ಯಕ್ಕೆ ಜನರು ಕಿಡಿಕಾರಿದ್ದಾರೆ.

ಅಂತಿಮವಾಗಿ, ಮಂಟಪದಲ್ಲಿ ಪೋಷಕರು ವೇದಿಕೆ ಹಿಡಿದು, ಮಧುಮಕ್ಕಳು ಪರದೆ ಮೇಲೆ ಕಾಣಿಸಿಕೊಂಡು ಆಶೀರ್ವಾದ ಪಡೆಯುವ ಅಪರೂಪದ ದೃಶ್ಯವೊಂದು ಹುಬ್ಬಳ್ಳಿಯಲ್ಲಿ ಸಾಕ್ಷಿಯಾದುದು, ಸಾಮಾಜಿಕ ಜಾಲತಾಣಗಳಲ್ಲೂ ಈಗ ಚರ್ಚೆಗೆ ಗ್ರಾಸವಾಗಿದೆ.