ಕೊಲೆ ಬೆದರಿಕೆ ಹಾಕಿದ್ದ ರೌಡಿ ಶೀಟರ್ ಹತ್ಯೆ: ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಬಂಧನ

Dec 18, 2025 - 23:29
Dec 19, 2025 - 09:21
 0  1k
ಕೊಲೆ ಬೆದರಿಕೆ ಹಾಕಿದ್ದ ರೌಡಿ ಶೀಟರ್ ಹತ್ಯೆ:  ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಬಂಧನ
(ಬಂಧಿತ ಆರೋಪಿಗಳು)

ಮಂಡ್ಯ, ಡಿ.18: ಕೊಲೆ ಮಾಡುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ರೌಡಿ ಶೀಟರ್‌ ನನ್ನೇ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದ ಬಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಕಳೆದ ನವೆಂಬರ್ 29ರಂದು ಲಕ್ಷ್ಮೀಸಾಗರ ನಿವಾಸಿ ರೌಡಿ ಶೀಟರ್ ಮಹೇಶ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಸವರಾಜು, ಶಶಾಂಕ್, ಹೇಮಂತ್ ಕುಮಾರ್ ಹಾಗೂ ಸುಮಂತ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹೇಶ್ ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆತನ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ಮಹೇಶ್, ಅವಧಿ ಮುಗಿದ ಬಳಿಕ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೊಲೆಗೆ ಮೂರು ದಿನಗಳ ಮುನ್ನ ಆತ ಊರಿಗೆ ಮರಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 28ರಂದು ಜಕ್ಕನಹಳ್ಳಿಯ ಬಾರ್‌ ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಅಮೃತಿ ಗ್ರಾಮದ ಬಳಿ ಮಾರುತಿ ಓಮ್ನಿಯಲ್ಲಿ ಬಂದ ಆರೋಪಿಗಳು ಮೊದಲು ಬೈಕ್‌ ಗೆ ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಮೇಲುಕೋಟೆ ಠಾಣೆ ಪೊಲೀಸರು ಗಾಯಗೊಂಡ ಮಹೇಶ್‌ ನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, A1 ಆರೋಪಿ ಭೀಮಾ ಅಲಿಯಾಸ್ ಚಂದ್ರಶೇಖರ ನ್ಯಾಯಾಲಯಕ್ಕೆ ಶರಣಾದ ಬಳಿಕ, ಉಳಿದ ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪಡೆದಿದ್ದಾರೆ. ಜಿಗಿಣಿಯ ಲಾಡ್ಜ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

ಲಕ್ಷ್ಮೀಸಾಗರದ ಮತ್ತೊಬ್ಬ ರೌಡಿ ಶೀಟರ್‌ನೊಂದಿಗೆ ಆರೋಪಿಗಳು ಸ್ನೇಹ ಬೆಳೆಸಿದ್ದ ಕಾರಣಕ್ಕೆ ಮಹೇಶ್ ಅವರ ಮೇಲೆ ದ್ವೇಷ ಸಾಧಿಸುತ್ತಿದ್ದ. ಈ ವಿಚಾರವಾಗಿ ಹಲವು ಬಾರಿ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಆರೋಪಿಗಳು ಸೇರಿ ಹತ್ಯೆಗೆ ಸಂಚು ರೂಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0