ಅಂತರ್ಜಾತಿ ವಿವಾಹದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳ ಹತ್ಯೆ ಹೆತ್ತ ತಂದೆಯಿಂದಲೇ ನಡೆದ ಮರ್ಯಾದಾ ಹತ್ಯೆ

Dec 23, 2025 - 12:27
 0  525
ಅಂತರ್ಜಾತಿ ವಿವಾಹದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳ ಹತ್ಯೆ ಹೆತ್ತ ತಂದೆಯಿಂದಲೇ ನಡೆದ ಮರ್ಯಾದಾ ಹತ್ಯೆ

ಹುಬ್ಬಳ್ಳಿ:ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ಸ್ವತಃ ಹೆತ್ತ ತಂದೆಯೇ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿದೆ. 

ಇನಾಂ ವೀರಾಪುರ ಗ್ರಾಮದ ವಿವೇಕಾನಂದ ಮತ್ತು ಮಾನ್ಯಾ ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಾನ್ಯಾ ಲಿಂಗಾಯತ ಸಮುದಾಯದವರಾಗಿದ್ದರೆ, ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದವರು. ಜಾತಿ ಭೇದದ ಹಿನ್ನೆಲೆಯಲ್ಲಿ ಮಾನ್ಯಾಳ ಕುಟುಂಬ ಈ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೂ ಮಾನ್ಯಾ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ವಿವೇಕಾನಂದನನ್ನು ಮದುವೆಯಾಗಿದ್ದರು.

ಕಳೆದ ಜೂನ್ 19ರಂದು ಇಬ್ಬರೂ ಹುಬ್ಬಳ್ಳಿಯಲ್ಲಿ ನೋಂದಣಿ ವಿವಾಹ ಮಾಡಿಕೊಂಡಿದ್ದರು. ವಿವಾಹದ ಬಳಿಕ ಪೊಲೀಸರು ಮಧ್ಯಪ್ರವೇಶಿಸಿ, ಎರಡೂ ಕುಟುಂಬಗಳ ನಡುವೆ ರಾಜಿ ಸಂಧಾನ ಮಾಡಿಸಿದ್ದರು. ಆ ನಂತರ ದಂಪತಿ ಹಾವೇರಿಯಲ್ಲಿ ವಾಸವಾಗಿದ್ದರು. ಈ ಅವಧಿಯಲ್ಲಿ ಮಾನ್ಯಾ ಗರ್ಭಿಣಿಯಾಗಿದ್ದರು.

ಎಲ್ಲವೂ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಡಿಸೆಂಬರ್ 8ರಂದು ದಂಪತಿ ಸ್ವಗ್ರಾಮಕ್ಕೆ ಮರಳಿದ್ದರು. ಆದರೆ, ಕುಟುಂಬದ ವಿರೋಧ ಮತ್ತೆ ತೀವ್ರಗೊಂಡಿತ್ತು. ಈ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ಎರಡೂ ಕಡೆಯವರನ್ನು ಕರೆಸಿ ಸಂಧಾನ ನಡೆಸಿದ್ದರು. ಇದಾದ ಕೇವಲ ಎರಡು ವಾರಗಳಲ್ಲೇ ಈ ದುರ್ಘಟನೆ ಸಂಭವಿಸಿದೆ.

ಭಾನುವಾರ ಸಂಜೆ ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಹಾಗೂ ಅವರ ಸಂಬಂಧಿಗಳು ವಿವೇಕಾನಂದನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಗರ್ಭಿಣಿಯಾಗಿದ್ದ ಮಾನ್ಯಾಳ ಮೇಲೆ ಪೈಪ್ ಮತ್ತು ಗುದ್ದಲಿಯಿಂದ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ಮಾನ್ಯಾಳನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಈ ದಾಳಿಯಲ್ಲಿ ಮಾನ್ಯಾಳ ಅತ್ತೆ, ಮಾವ ಸೇರಿ ಇನ್ನೂ ಮೂವರು ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾನ್ಯಾಳ ಹತ್ಯೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾದ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 1