ಹಣದ ವಿಚಾರಕ್ಕೆ ಪೋಷಕರನ್ನೇ ಹತ್ಯೆ ಮಾಡಿ ನದಿಗೆ ಎಸೆದ ಮಗ

Dec 18, 2025 - 22:04
Dec 19, 2025 - 09:23
 0  1.4k
ಹಣದ ವಿಚಾರಕ್ಕೆ ಪೋಷಕರನ್ನೇ ಹತ್ಯೆ ಮಾಡಿ ನದಿಗೆ ಎಸೆದ  ಮಗ
Photo credit:NDTV

ಲಕ್ನೋ: ಹಣದ ವಿಚಾರವಾಗಿ ತನ್ನ ಪೋಷಕರನ್ನೇ ಹತ್ಯೆಗೈದ ಆರೋಪದ ಮೇಲೆ 30 ವರ್ಷದ ಯುವಕನನ್ನು ಜೌನ್‌ಪುರ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ. ಬಂಧಿತನನ್ನು ಅಂಬೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶದ ಜಫ್ರದಾಬಾದ್ ನಿವಾಸಿಗಳಾದ ಶ್ಯಾಮ್ ಬಹದ್ದೂರ್ ಮತ್ತು ಅವರ ಪತ್ನಿ ಬಬಿತಾ ದೇವಿ ಡಿಸೆಂಬರ್ 8ರಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರಿ ವಂದನಾ ದೇವಿ ಜೌನ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಜೌನ್‌ಪುರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಶ್ರೀವಾಸ್ತವ ತಿಳಿಸಿದ್ದಾರೆ.

ಈ ಸಂಬಂಧ ಡಿಸೆಂಬರ್ 12ರಂದು ಮತ್ತೊಂದು ದೂರು ಸಲ್ಲಿಸಿದ ವಂದನಾ ದೇವಿ, ತನ್ನ ಸಹೋದರ ಅಂಬೇಶ್ ಕುಮಾರ್ ಕೂಡ ನಾಪತ್ತೆಯಾಗಿದ್ದಾನೆ ಎಂದು ಉಲ್ಲೇಖಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಮೂವರು ಕಾಣೆಯಾದವರ ಪತ್ತೆಗೆ ಮೂರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು.

ತನಿಖೆಯ ವೇಳೆ ಸೋಮವಾರ ಸಂಜೆ ಜೌನ್‌ಪುರ ನಗರದಲ್ಲಿ ಅಂಬೇಶ್ ಕುಮಾರ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಡಿಸೆಂಬರ್ 8ರಂದು ಹಣದ ವಿಚಾರವಾಗಿ ನಡೆದ ಜಗಳದ ಸಂದರ್ಭದಲ್ಲಿ ರುಬ್ಬುವ ಗುಂಡಿನಿಂದ ಪೋಷಕರ ಮೇಲೆ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರ ಮೃತದೇಹಗಳನ್ನು ಗೋಣಿ ಚೀಲದಲ್ಲಿ ತುಂಬಿ ಗೋಮತಿ ನದಿಗೆ ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆತನ ಹೇಳಿಕೆಯ ಆಧಾರದಲ್ಲಿ ಮೃತದೇಹಗಳ ಪತ್ತೆಗೆ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0