3 ಕೋಟಿ ರೂ. ವಿಮಾ ಹಣಕ್ಕಾಗಿ ತಂದೆಗೆ ಹಾವು ಕಚ್ಚಿಸಿ ಕೊಂದ ಪುತ್ರರು!

Dec 21, 2025 - 23:18
 0  2k
3 ಕೋಟಿ ರೂ. ವಿಮಾ ಹಣಕ್ಕಾಗಿ ತಂದೆಗೆ ಹಾವು ಕಚ್ಚಿಸಿ ಕೊಂದ ಪುತ್ರರು!
ವಿಷಕಾರಿ ಹಾವು : photo credit: Etv bharath

ತಿರುವಳ್ಳೂರು (ತಮಿಳುನಾಡು): ಮೂರು ಕೋಟಿ ರೂ. ವಿಮಾ ಹಣ ಪಡೆಯುವ ಉದ್ದೇಶದಿಂದ ಇಬ್ಬರು ಗಂಡು ಮಕ್ಕಳು ತಮ್ಮ ಹೆತ್ತ ತಂದೆಯನ್ನು ವಿಷಕಾರಿ ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣವನ್ನು ಭೇದಿಸಿರುವ ಪೊಲೀಸರು ಪುತ್ರರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.

ತಿರುತ್ತಣಿ ಸಮೀಪದ ಪೊಡತೂರ್ಪೇಟೆ ಪಟ್ಟಣದ ನಿವಾಸಿ ಗಣೇಶನ್ (56) ಮೃತರು. ಸರ್ಕಾರಿ ಪ್ರಯೋಗಾಲಯದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಗಣೇಶನ್‌ ಅಕ್ಟೋಬರ್ ತಿಂಗಳಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾರೆ ಎಂದು ಪುತ್ರರಾದ ಮೋಹನ್ ರಾಜ್ ಮತ್ತು ಹರಿಹರನ್ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ತನಿಖೆಯ ವೇಳೆ ಗಣೇಶನ್‌ ಅವರ ಹೆಸರಿನಲ್ಲಿ ಒಟ್ಟು 11 ವಿಮಾ ಪಾಲಿಸಿಗಳು ಇದ್ದು, ಅವುಗಳಲ್ಲಿ ಪ್ರಮುಖ ನಾಲ್ಕು ಪಾಲಿಸಿಗಳಿಂದ ಸುಮಾರು 3 ಕೋಟಿ ರೂ. ಮೊತ್ತ ಲಭಿಸುವ ಸಾಧ್ಯತೆ ಇರುವುದನ್ನು ಪೊಲೀಸರು ಪತ್ತೆಹಚ್ಚಿದರು. ಜೊತೆಗೆ ಪುತ್ರರು ನೀಡಿದ ಹೇಳಿಕೆಗಳಲ್ಲಿ ಪರಸ್ಪರ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ಅನುಮಾನಾಸ್ಪದವಾಗಿ ಪರಿಣಮಿಸಿತು. ಈ ಕುರಿತು ವಿಮಾ ಕಂಪೆನಿಯೂ ತನಿಖೆಗೆ ಒತ್ತಾಯಿಸಿತ್ತು.

ವಿಶೇಷ ತನಿಖಾ ತಂಡ ರಚಿಸಿ ವಿಚಾರಣೆ ನಡೆಸಿದಾಗ, ವಿಮಾ ಹಣ ಪಡೆಯಲು ಪುತ್ರರು ಸಂಚು ರೂಪಿಸಿದ್ದು ಬಯಲಾಗಿದೆ. ಮೊದಲ ಪ್ರಯತ್ನದಲ್ಲಿ ತಂದೆಯನ್ನು ಕೊಲ್ಲಲು ತಂದಿದ್ದ ಹಾವು ಕಚ್ಚದೇ ವಿಫಲವಾದ ಬಳಿಕ, ಒಂದು ವಾರದ ನಂತರ 1.5 ಲಕ್ಷ ರೂ. ನೀಡಿ ಸುಮಾರು ಮೂರು ಅಡಿ ಉದ್ದದ ವಿಷಕಾರಿ ಕ್ರೈಟ್ ಹಾವನ್ನು ಖರೀದಿಸಿ ತಂದೆಯ ಕತ್ತಿಗೆ ಕಚ್ಚಿಸಿ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಅನುಮಾನ ಬರದಂತೆ ಹಾವು ಕಚ್ಚಿದ ನಂತರ ಮನೆಯೊಳಗೇ ಹಾವನ್ನು ಕೊಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಈ ಕೃತ್ಯಕ್ಕೆ ಬಾಲಾಜಿ, ಪ್ರಶಾಂತ್, ನವೀನ್ ಕುಮಾರ್ ಹಾಗೂ ದಿನಕರನ್ ಎಂಬ ಸ್ನೇಹಿತರು ಸಹಾಯ ಮಾಡಿದ್ದು, ಬಂಧಿತರಲ್ಲಿ ಒಬ್ಬ ಉರಗ ತಜ್ಞನಾಗಿದ್ದಾನೆ. ಆರೋಪಿಗಳಿಂದ ಐಷಾರಾಮಿ ಕಾರು ಹಾಗೂ ಆರು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0