ಕೆದಮುಳ್ಳೂರಿನಲ್ಲಿ ವಿಜೃಂಭಣೆಯಿಂದ ನಡೆದ‌ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ

Apr 6, 2026 - 15:24
 0  243
ಕೆದಮುಳ್ಳೂರಿನಲ್ಲಿ ವಿಜೃಂಭಣೆಯಿಂದ ನಡೆದ‌ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ

ವಿರಾಜಪೇಟೆ:ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ಅತ್ಯಂತ ವಿಜೃಂಬಣೆಯಿಂದ ನಡೆಯಿತು.

ಕೆದಮುಳ್ಳೂರು ಚಾಮುಂಡಿ ಹಬ್ಬ ಎಂದರೆ ಎಲ್ಲೆಡೆ ಪ್ರಚಲಿತದಲ್ಲಿದ್ದು ಅತ್ಯಂತ ಹೆಸರುವಾಸಿಯಾಗಿದ್ದು, ಹಾಗೂ ಅತ್ಯಂತ ಶಕ್ತಿಯನ್ನು ಹೊಂದಿರತಕ್ಕಂತಹ ಚಾಮುಂಡಿ ದೇವಿಯ ಕ್ಷೇತ್ರವಾಗಿರುವುದರಿಂದ ಈ ಉತ್ಸವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ತರು, ದೂರ ದೂರದ ಊರುಗಳಿಂದ ಭಕ್ತರು, ಆಗಮಿಸಿ ದೇವರಲ್ಲಿ ಹರಕೆ ಹೊತ್ತುಕೊಂಡು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಂಡರು.

 ಏ.೨ ರಂದು ಕೊಟ್ಟಿಪಾಡವೊದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಏ.೩ರ ರಾತ್ರಿ ನಾನಾ ತೆರೆ (ಕೋಲ)ಗಳು ನಡೆದವು. ಏ.೪ ರಂದು ಬೆಳಗ್ಗೆ ೭.೩೦ರ ಸುಮಾರಿಗೆ ಪ್ರಮುಖವಾದ ವಿಷ್ಣುಮೂರ್ತಿ ಕೋಲವು ದೇವಾಲಯದ ಮುಂದೆ ಸಿದ್ಧಪಡಿಸಿದ್ದ ಬೆಂಕಿ ಕೆಂಡದ ಮೇಲೆ ೧೦೧ ಬಾರಿ ಬೀಳುವ ತೆರೆ ನಡೆಯಿತು.

ಇದಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಬಳಿಕ ಮಧ್ಯಾಹ್ನ ೧೨ ರ ಸುಮಾರಿಗೆ ಇನ್ನೊಂದು ಪ್ರಮುಖವಾದ ಚಾಮುಂಡಿ ದೇವಿಯ ಕೋಲವನ್ನು ಪ್ರಸ್ತುತಪಡಿಸಲಾಯಿತು. ಈ ಉತ್ಸವದ ಕೊನೆಯ ತೆರೆಯಾದ ಚಾಮುಂಡಿ ದೇವಿ ಕೆಂಪು ವಸ್ತçದಲ್ಲಿ ಕಂಗೋಳಿಸುವ ತೆರೆ ಆಕರ್ಷಕವಾಗಿತ್ತು. ಈ ತೆರೆಗೆ ಉದ್ದನೆಯ ಬಿದಿರಿನಿಂದ ತಯಾರಿಸಿ ಶೃಂಗಾರಗೊಳಿಸಿದ ಮುಡಿಯನ್ನು ಏರಿಸಲಾಗುತ್ತದೆ. ಇದು ಭಕ್ತರನ್ನು ಆಕರ್ಷಿಸುವುದಲ್ಲದೆ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತದೆ.

 ಸಂಜೆ ವೇಳೆಗೆ ದೇವರು ಬನಕ್ಕೆ ತೆರಳಿ ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಾರ್ಷಿಕ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ವಾರ್ಷಿಕ ತೆರೆ ಮಹೋತ್ಸವದಲ್ಲಿ ಸ್ಥಳೀಯರು ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿ ಹರಕೆ ಕಾಣಿಕೆಗಳನ್ನು ಒಪ್ಪಿಸಿದರು. ಚಾಮುಂಡಿ ತೆರೆಯ ವೇಳೆ ಧಾರಾಕಾರವಾಗಿ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0